‘ಎಸ್ಐಆರ್’ ರಾಜ್ಯ ಸರಕಾರ ದೃಢ ತೀರ್ಮಾನ ತೆಗೆದುಕೊಳ್ಳಲು ಸಿಪಿಎಂ ಒತ್ತಾಯ

ಸಾಂದರ್ಭಿಕ ಚಿತ್ರ | File Photo
ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಪ್ರಥಮ ಹಂತದ ಮ್ಯಾಪಿಂಗ್ ಮುಗಿದಿದ್ದು, ಅದರಲ್ಲಿ 1.10 ಕೋಟಿ ಜನರದ್ದು 2002ರ ಪಟ್ಟಿಗೆ ಹೊಂದಾಣಿಕೆ ಆಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಇದುವರೆಗೂ ಈ ಯಾವ ವಿಷಯಗಳ ಬಗ್ಗೆ ಹೆಚ್ಚು ಗಮನ ಕೊಡದೆ ಇರುವ ಸರಕಾರ ಕೊನೆಯ ಹಂತದಲ್ಲಿಯಾದರೂ ಎಸ್ಐಆರ್ ವಿರುದ್ಧ ದೃಢ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಒತ್ತಾಯಿಸಿದೆ.
ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾರ್ಯದರ್ಶಿ ಕೆ.ಪ್ರಕಾಶ್, ಈ ಹಿಂದೆ ಪ್ರಯತ್ನಿಸಿ ಸಾಧಿಸಲಾಗದ ಪೌರತ್ವ ದೃಢೀಕರಣದ ಕೆಲಸಕ್ಕೆ ಕೇಂದ್ರದ ಎನ್ಡಿಎ ಸರಕಾರ, ಈಗ ನವೆಂಬರ್ನಲ್ಲಿಯೇ ಚು.ಆಯೋಗದ ಮೂಲಕ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಪ್ರಯತ್ನ ಆರಂಭ ಮಾಡಿಕೊಂಡಿದೆ ಎಂದಿದ್ದಾರೆ.
ಮೂರನೇ ಹಂತವಾಗಿ ಎಸ್ಐಆರ್ ಕರ್ನಾಟಕದಲ್ಲಿ ಪ್ರಾರಂಭವಾಗಲಿದೆ. ಸಚಿವ ಸಂಪುಟ ಮತ್ತೆ ಕಾನೂನಾತ್ಮಕ ಕ್ರಮಗಳತ್ತಲೇ ಒಲವು ತೋರಿಸುತ್ತಿರುವ ಹೇಳಿಕೆಗಳು ಬರುತ್ತಿವೆ. ಮತದಾರರಲ್ಲದವರು ಗ್ಯಾರಂಟಿ ಯೋಜನೆಗಳನ್ನು ಕಳೆದುಕೊಳ್ಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಯಾರೊಬ್ಬರೂ ಸೌಲಭ್ಯಗಳಿಂದ ವಂಚಿತರಾಗದಂತೆ ಕ್ರಮತೆಗೆದುಕೊಳ್ಳುವುದು ಸರಕಾರದ ಕರ್ತವ್ಯ. ನ್ಯಾಯಾಲಯಗಳ ಹಿಂದಿನ ಅನುಭವಗಳು ಭಿನ್ನವಾಗಿದೆ ಎಂಬುದು ಗೊತ್ತಿದ್ದೂ, ಅದನ್ನು ಮಾತ್ರ ನಂಬಿದರೆ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶಗಳ ರೀತಿಯೇ ಇಲ್ಲಿ ಪುನರಾವರ್ತನೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಪ್ರಕಾಶ್ ಎಚ್ಚರಿಸಿದ್ದಾರೆ.
ಆದುದರಿಂದ ರಾಜ್ಯ ಸರಕಾರ ಚುನಾವಣಾ ಆಯೋಗದ ಹೇಳಿಕೆಯಂತೆ ಹೊಂದಾಣಿಕೆಯಾಗದ 1.10 ಕೋಟಿ ಜನರ ಪಟ್ಟಿ ಬಿಡುಗಡೆ ಮಾಡಲು ಒತ್ತಾಯಿಸಬೇಕು. ಯಾವ ಕಾರಣಕ್ಕಾಗಿ ಹೊಂದಾಣಿಕೆ ಆಗಿಲ್ಲ ಎಂಬ ಕಾರಣವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಎಲ್ಲ ಜಿಲ್ಲೆಗಳ ಪಂಚಾಯತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ತೆರೆದು ಜನರಿಗೆ ಮತದಾರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಾಮಾನ್ಯ ಜನರ ವಾಸ/ಜನ್ಮ ಸ್ಥಳಗಳ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಸುಲಭವಾಗಿ ಒದಗಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.
ಲಂಚ ರುಶುವತ್ತುಗಳ ಕಾಟವಿಲ್ಲದೇ ಜನರಿಗೆ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಬೇಕು. ಸಾರ್ವಜನಿಕವಾಗಿ ಜನರಿಗೆ ತಿಳುವಳಿಕೆ ಮೂಡಿಸಲು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ವೃತ್ತ ಪತ್ರಿಕೆಗಳು, ಮನೆ ಮನೆಗೂ ತಲುಪುವ ಹಾಲಿನ ಪ್ಯಾಕೆಟ್ಗಳ ಮೇಲೆ ಜಾಹಿರಾತುಗಳನ್ನು ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಡಂಗೂರ ಹೊಡೆಸಿ ಮಾಹಿತಿ ತಿಳಿಸಬೇಕು. ಕಡ್ಡಾಯವಾಗಿ ಗ್ರಾಮಸಭೆಗಳನ್ನು ನಡೆಸಿ ಪ್ರತಿ ಮನೆಗೂ ಮಾಹಿತಿ ತಲುಪುವಂತೆ ಸರಕಾರಿ ಯಂತ್ರಗಳನ್ನು ಸಕ್ರಿಯಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಒತ್ತಾಯಿಸಿದ್ದಾರೆ.






