ಪಿಯುಸಿ ತರಗತಿ ನಡೆಸುವ ಖಾಸಗಿ ಕೋಚಿಂಗ್ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಡಿ : ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಸೂಚನೆ

ಬೆಂಗಳೂರು : ಕೆಲವು ಖಾಸಗಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಸೇರಿ ಶೈಕ್ಷಣಿಕ ಚಟುವಟಿಕೆಗಳನ್ನು ಖಾಸಗಿ ತರಬೇತಿ ಅಥವಾ ಕೋಚಿಂಗ್ ಸಂಸ್ಥೆಗಳಲ್ಲಿ ನಡೆಸಲಾಗುತ್ತಿದ್ದು, ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಗಂಭೀರ ತೊಡಕು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ದಾಖಲಾಗಬಾರದು ಎಂದು ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ.
ಮಂಗಳವಾರ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದು, ಅನುಮೋದಿತ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದರೂ, ವಾಸ್ತವಿಕವಾಗಿ ಪಾಠಗಳನ್ನು ಯಾವುದೇ ಮಾನ್ಯತೆ ಅಥವಾ ಅಗತ್ಯ ಅನುಮೋದನೆಗಳನ್ನು ಹೊಂದಿರದ ಖಾಸಗಿ ತರಬೇತಿ ಅಥವಾ ಕೋಚಿಂಗ್ ಸಂಸ್ಥೆಗಳಲ್ಲಿ ನಡೆಸಲಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದಿದ್ದಾರೆ.
ಈ ರೀತಿಯ ಕ್ರಮಗಳು ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ) ನಿಯಮಗಳು-2024 ಹಾಗೂ ಕರ್ನಾಟಕ ಶಿಕ್ಷಣ ಕಾಯಿದೆ-1983ರ ನಿಯಮಗಳ ವಿರುದ್ಧವಾಗಿದ್ದು, ನಿಯಮ ಉಲ್ಲಂಘನೆಗಳಲ್ಲಿ ತೊಡಗಿರುವಂತಹ ಸಂಸ್ಥೆಗಳ ಕಾಲೇಜುಗಳ ಮಂಜೂರಾತಿ ಹಾಗೂ ಶೈಕ್ಷಣಿಕ ಮಾನ್ಯತೆಯನ್ನು ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಹೀಗಾಗಿ ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಗಂಭೀರ ತೋಡಕು ಉಂಟಾಗುವ ಸಾಧ್ಯತೆ ಇರುವುದರಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿತ ಪದವಿ ಪೂರ್ವ ಕಾಲೇಜಿನ ಅನುಮೋದಿತ ಸ್ಥಳದ ವಿಳಾಸ, ಅನುಮೋದನೆಗೊಂಡು ಮಂಜೂರಾದ ವಿಭಾಗಗಳು ಹಾಗೂ ಕಾಲೇಜಿನ ಪ್ರವೇಶ ಸಾಮರ್ಥ್ಯ ಕುರಿತು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಹೀಗಾಗಿ ಪ್ರಥಮ, ಪಿಯುಸಿ ಅಥವಾ ದ್ವಿತೀಯ ಪಿಯುಸಿಗೆ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಲು ಬಯಸುವ ಎಲ್ಲ ಪಾಲಕರು ಜಾಲತಾಣವನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.






