ನೂತನ ಸಂಪುಟದಲ್ಲಿ ‘ವೀರಶೈವ ಲಿಂಗಾಯತ ಸಮುದಾಯ’ಕ್ಕೆ ಪ್ರಾತಿನಿಧ್ಯ ನೀಡಲು ಮನವಿ

ಬೆಂಗಳೂರು : ರಾಜ್ಯ ಸರಕಾರದ ನೂತನ ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಯುವ ಘಟಕ ಒತ್ತಾಯಿಸಿದೆ.
ಶನಿವಾರ ನಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಡಿ.ಪಾಟೀಲ್, ಬಸವಣ್ಣನವರ ಲೌಕಿಕ ಮತ್ತು ಸಮಾನತಾ ತತ್ವದಿಂದ ಪ್ರೇರಿತವಾದ ಲಿಂಗಾಯತ ಸಮುದಾಯವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಆಡಳಿತಕ್ಕೆ ಒತ್ತು ನೀಡುವ ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ನೀಡಿದೆ. ಅತಿದೊಡ್ಡ ಸಮುದಾಯವಾಗಿದ್ದು, 37 ಮಂದಿ ಶಾಸಕರೊಂದಿಗೆ ಪಕ್ಷಕ್ಕೆ ಬೆಂಬಲ ಒದಗಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಮುಂಬರುವ ಸಂಪುಟದಲ್ಲಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೋರಿದರು.
ಈ ಬಾರಿಯ ಹೊಸ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಕನಿಷ್ಠ ಎಂಟು ಸ್ಥಾನಗಳ ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತಿದ್ದೇವೆ. ಜತೆಗೆ ಸಮುದಾಯದ ನಾಯಕ ಈಶ್ವರ್ ಖಂಡ್ರೆಗೆ ಡಿಸಿಎಂ ಸ್ಥಾನ ನೀಡಿದರೆ ಸಮುದಾಯಕ್ಕೆ ಸಂತೋಷವಾಗಲಿದೆ. ಜೊತೆಗೆ, ವಿಧಾನ ಪರಿಷತ್ ಸದಸ್ಯ ಸ್ಥಾನ ಹಾಗೂ ಸಮುದಾಯದ ಒಬ್ಬರಿಗೆ ರಾಜ್ಯಸಭಾ ಸದಸ್ಯ ಸ್ಥಾನವನ್ನು ನೀಡಬೇಕು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ಕೈಗಾರಿಕಾ ಮತ್ತು ವಾಣಿಜ್ಯ ಘಟಕದ ರಾಜ್ಯಾಧ್ಯಕ್ಷ ವಿಜಯ್‍ಕುಮಾರ್ ಪಾಟೀಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂದೀಪ್ ಅನಬೇರು, ರಾಜಶೇಖರ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






