ಜಾಮೀನಿಗೆ ತಕರಾರು ಅರ್ಜಿ ಸಲ್ಲಿಸಲು ಲಂಚ ಪಡೆದ ಆರೋಪ: ಲೋಕಾಯುಕ್ತರ ಬಲೆಗೆ ಬಿದ್ದ ಸರಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್

ಬೆಂಗಳೂರು : ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ದೂರುದಾರರಿಂದ ಬೇಡಿಕೆಯಿಟ್ಟಿದ್ದ 5 ಸಾವಿರ ರೂ. ಲಂಚ ಪಡೆಯುವ ವೇಳೆಯಲ್ಲಿ ಸರಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‍ಪಿಪಿ)ವೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ಸೋಮವಾರ ವರದಿಯಾಗಿದೆ.
ಸವಿತಾ ನವೀನ್ ಪಾಟೀಲ್ ಎಂಬುವರು ಸಿಕ್ಕಿಬಿದ್ದಿರುವ ಸರಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ಗುರುತಿಸಲಾಗಿದೆ. ನಗರದ ಸಿಸಿಎಚ್-54ರ ನ್ಯಾಯಾಲಯದಲ್ಲಿ ಎಸ್‍ಪಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೂ.1ರ ಸೋಮವಾರ ಬೆಳಗ್ಗೆ ದೂರುದಾರರಿಂದ 5 ಸಾವಿರ ರೂ.ಲಂಚದ ಹಣವನ್ನು ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಸದ್ಯ ಎಸ್‍ಪಿಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಪೂಜೆ ನೆಪದಲ್ಲಿ ಬ್ಯೂಟಿಷಿಯನ್ ಆಗಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಜ್ಯೋತಿಷಿಯೊಬ್ಬರ ವಿರುದ್ಧ ಕೆಲ ದಿನಗಳ ಹಿಂದೆ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಜ್ಯೋತಿಷಿಯೊಬ್ಬರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಎಸ್‍ಪಿಪಿಗೆ ಕೋರ್ಟ್ ತಿಳಿಸಿತ್ತು.
ಪ್ರಕರಣದ ವಿಚಾರಣೆ ಮುಂದುವರೆಸಲು ಸಂತ್ರಸ್ತೆ ಬಳಿ ಸವಿತಾ ಅವರು ಲಂಚ ಕೇಳಿದ್ದರು. ಟೈಪಿಂಗ್ ಸೇರಿದಂತೆ ಇನ್ನಿತರ ಖರ್ಚಿಗಾಗಿ 5 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಂತ್ರಸ್ತೆ ಪರವಾಗಿ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಶ್ರೀಕಾಂತ್ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.






