ರಾಜ್ಯಾದ್ಯಂತ ಅದ್ಧೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ

ಬೆಂಗಳೂರು : ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವವು ಅದ್ಧೂರಿಯಾಗಿ ನಡೆದಿದ್ದು, ಮೊದಲ ದಿನದಂದು ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎರಡು ತಿಂಗಳ ಕಾಲ ಬೇಸಿಗೆ ರಜೆ ಮುಗಿಸಿ ಆಗಮಿಸಿದ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ತುಂಬಿತ್ತು.
ಸೋಮವಾರ ಶಾಲೆಯ ಆವರಣವನ್ನು ಹೂವುಗಳಿಂದ ಮತ್ತು ಆಕರ್ಷಕ ರಂಗೋಲಿಗಳಿಂದ ಶೃಂಗರಿಸಲಾಗಿತ್ತು. ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್‍ಡಿಎಂಸಿ) ವತಿಯಿಂದ ಹೂವಿನ ಮಳೆ ಗರೆಯುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಅರ್ಹ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು. ಬಹುತೇಕ ಶಾಲೆಗಳಲ್ಲಿ ಶಾಲೆಯ ಆರಂಭದ ದಿನವೇ ಪೋಷಕರು-ಶಿಕ್ಷಕರ ಮಹಾಸಭೆಯನ್ನು ಆಯೋಜಿಸಿ, ಶೈಕ್ಷಣಿಕ ವರ್ಷದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಅಗತ್ಯ ಸೌಕರ್ಯಗಳನ್ನು ಪರಿಶೀಲಿಸಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳಿಗೆ ವಿಶೇಷವಾಗಿ ಪಾಯಸದ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಎಲ್ಲ ಶಾಲೆಗಳಲ್ಲಿ ಶೇ.90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಇನ್ನು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿಕೊಳ್ಳುವ ಅಭಿಯಾನ ತಿಂಗಳ ಅಂತ್ಯದವರೆಗೆ ನಡೆಯಲಿದೆ.






