ವಿಜ್ಞಾನವನ್ನು ಸರಳ ಕನ್ನಡದಲ್ಲಿ ತಲುಪಿಸುವ ಕೆಲಸವಾಗಲಿ : ಪ್ರೊ.ರಾಘವೇಂದ್ರ ರಾವ್

ಬೆಂಗಳೂರು : ಇಂದಿಗೂ ಕನ್ನಡದಲ್ಲಿ ಮನಸ್ಸು ಅಥವಾ ಶಸ್ತ್ರ ಚಿಕಿತ್ಸೆಯ ಬಗೆಗಿನ ಕೃತಿಗಳಿಲ್ಲ. ಆದುದರಿಂದ ವಿಜ್ಞಾನದ ವಿಚಾರವನ್ನು ಕನ್ನಡಿಗರಿಗೆ ಸರಳಗನ್ನಡದಲ್ಲಿ ತಲುಪಿಸುವ ನಿಟ್ಟಿನಲ್ಲಿ ಯುವ ಜನರು ಪ್ರಯತ್ನ ನಡೆಸಬೇಕು ಎಂದು ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರ ರಾವ್ ಕರೆ ನೀಡಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೃಪತುಂಗ ವಿಶ್ವವಿದ್ಯಾನಿಲಯದ ಎರಡು ಮತ್ತು ಮೂರನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವ ಜನರು ವಿಜ್ಞಾನವನ್ನು ಇಂಗ್ಲಿಷ್‌ನಲ್ಲಿ ಕಲಿತಾದರೂ ಕನ್ನಡಿಗರಿಗಾಗಿ ವಿಜ್ಞಾನವನ್ನು ತಲುಪಿಸುವ ಕೆಲಸವಾಗಬೇಕು. ಕನ್ನಡದಲ್ಲಿ ವಿಜ್ಞಾನವನ್ನು ತಲುಪಿಸಿದರೆ ಎಲ್ಲರಿಗೂ ಅರ್ಥವಾಗುವುದರ ಜತೆಗೆ ಅಳವಡಿಸಿಕೊಳ್ಳಲು ಸಹಾಯವಾಗಲಿದೆ ಎಂದರು.
ವಿಜ್ಞಾನವನ್ನು ಇಲ್ಲಿಯವರೆಗೂ ಪಾಶ್ಚಾತ್ಯ ನೆಲೆಗಟ್ಟಿನಲ್ಲಿಯೇ ನೋಡಲಾಗಿದೆ. ಆದುದರಿಂದ ‘ವಿಜ್ಞಾನ ಮತ್ತು ಭಾರತೀಯ ಪರಂಪರೆ’ಯ ಅಮೂರ್ತ ಚಿಂತನೆಯಾಗಬೇಕಿದೆ. ಇಂದು ಮೂಲ ವಿಜ್ಞಾನ, ಭೌತ ವಿಜ್ಞಾನವನ್ನು ಬಿಟ್ಟು ಎಲ್ಲರೂ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ. ಆದರೆ ವಿಜ್ಞಾನವಿಲ್ಲದೆ, ತಂತ್ರಜ್ಞಾನವಿಲ್ಲ, ತಂತ್ರಜ್ಞಾನದ ಮೂಲ ಬೇರು ವಿಜ್ಞಾನ ಎಂಬುದನ್ನು ಅರಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ವಿಜ್ಞಾನವನ್ನು ಪ್ರಗತಿಗಿಂತ ವಿನಾಶಕ್ಕೇ ಹೆಚ್ಚು ಬಳಸಲಾಗುತ್ತಿದೆ. ಅದರಲ್ಲಿಯೂ ಮುಂದುವರಿದ ದೇಶಗಳು ಹೆಚ್ಚು ವಿನಾಶಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಅವರು ಹೇಳಿದರು.
ಘಟಿಕೋತ್ಸವದಲ್ಲಿ 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 700 ಸ್ನಾತಕ ಮತ್ತು 1,081 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಕೆ.ಮೋಹನ್ ಕುಮಾರ್, ಮೌಲ್ಯಮಾಪನ ಕುಲಸಚಿವ ಮಂಜುನಾಥ ಟಿ.ಎಂ, ಆಡಳಿತ ಕುಲಸಚಿವೆ ಅದಾ ಫಾತಿಮಾ, ಪ್ರಾಧ್ಯಾಪಕ ಪ್ರೊ.ಅಣ್ಣಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.






