ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ರಾಮಲಿಂಗಾರೆಡ್ಡಿಗೆ ಈ ಹಿಂದೆ ಹೇಳಿದ್ದು ನಿಜ : ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಷ್ಟ್ರದಲ್ಲಿಯೇ ಸಂಚಲನವುಂಟಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಮಾಹಿತಿಯಿದೆ. ಕಾರ್ಯಕರ್ತರಲ್ಲಿಯೂ ಹುರುಪಿದೆ. ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ರಾಮಲಿಂಗಾ ರೆಡ್ಡಿ ಅವರಿಗೆ ಈ ಹಿಂದೆ ಹೇಳಿದ್ದು ನಿಜ, ಅವರೊಂದಿಗೆ ಈ ಬಗ್ಗೆ ಚರ್ಚಿಸುವೆ. ಅವರು ನಮ್ಮ ಅತ್ಯಂತ ಹಿರಿಯ ನಾಯಕರು ಎಂದು ಹೇಳಿದರು.
ರಾಮಲಿಂಗಾರೆಡ್ಡಿಯವರಿಗೆ ಸಾರಿಗೆ ಖಾತೆ ಕೊಟ್ಟ ಸಂದರ್ಭದಲ್ಲಿ ನಾನು ಹಾಗೂ ನನ್ನ ಸಹೋದರ ಹೋಗಿ ಅವರನ್ನು ಒಪ್ಪಿಸಿದ್ದೆವು. ಆಗ ಸಚಿವ ಸುಧಾಕರ್ ಬಳಿ ಇದ್ದ ಮುಜರಾಯಿ ಖಾತೆಯನ್ನು ಅವರಿಗೆ ಕೊಟ್ಟಿದ್ದು ನಿಜ. ಪಕ್ಷದ ವರಿಷ್ಠರು ಈಗ ತೀರ್ಮಾನ ಮಾಡಿ, ಕೃಷ್ಣಬೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದಾರೆ. ನಾನು ನನ್ನ ಪ್ರಯತ್ನ ಮಾಡಿದೆ. ಆದರೆ ಪಕ್ಷ ಈ ತೀರ್ಮಾನ ಮಾಡಿದೆ ಎಂದು ಅವರು ತಿಳಿಸಿದರು.
ಕೆ.ಎಚ್.ಮುನಿಯಪ್ಪ ಅಸಮಾಧಾನದ ಬಗ್ಗೆ ಹೇಳಿದ್ದು ಆಯ್ತು, ಪಕ್ಷ ಅವರನ್ನು ಒಪ್ಪಿಸಿದ್ದು ಆಗಿದೆ. ರಾಹುಲ್ ಗಾಂಧಿ ಅವರು ಮುನಿಯಪ್ಪ ಜೊತೆ ಮಾತನಾಡಿದ್ದು, ಅವರು ಸಂತೋಷದಿಂದ ಪಕ್ಷ ಏನು ಕೊಟ್ಟರೂ ಸ್ವೀಕಾರ ಮಾಡುತ್ತೇನೆ ಹಾಗೂ ಪಕ್ಷಕ್ಕೆ ದುಡಿಯುವುದಾಗಿ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.






