ಸ್ಟಾರ್ಟ್ ಅಪ್‍ಗಳಿಗೆ ಪೂರಕ ವಾತಾವರಣ ಕಲ್ಪಿಸಲು ರೈಸ್ ಸಮ್ಮೇಳನ ಆಯೋಜನೆ : ಡಾ.ಜಿತೇಂದ್ರ ಸಿಂಗ್

ಬೆಂಗಳೂರು, ಜೂ. 13: ಸ್ಟಾರ್ಟ್ ಅಪ್ ಗಳನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ನೆಲೆಗೊಳಿಸುವುದು ಬಹಳ ಕಷ್ಟ. ಅದಕ್ಕಾಗಿ ಪೂರಕ ವಾತಾವರಣ ಬೇಕಾಗುತ್ತದೆ. ಹೀಗಾಗಿಯೇ ರೈಸ್ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಡಾ.ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸಿಎಸ್‍ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೋಟೀಸ್ ವತಿಯಿಂದ ಆಯೋಜಿಸಿದ್ದ 'ಸಂಶೋಧನೆ, ಕೈಗಾರಿಕೆ, ನವೋದ್ಯಮ ಮತ್ತು ಉದ್ಯಮಶೀಲತೆ - ರೈಸ್ ಸಮಾವೇಶ 2026’ ವಿಕಸಿತ ಭಾರತ 2047ಕ್ಕಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2014ರಲ್ಲಿ ದೇಶದಲ್ಲಿ ಕೇವಲ 350-400 ಸ್ಟಾರ್ಟ್ ಅಪ್ ಗಳಿದ್ದವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಭಾಷಣದಲ್ಲಿ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್‍ಅಪ್ ಇಂಡಿಯಾ ಎಂದಾಗ ಅನೇಕರು ಅಪಹಾಸ್ಯ ಮಾಡಿದ್ದರು. ಇದಕ್ಕೆಲ್ಲ ಏನು ಅರ್ಥ ಇದೆ? ಎಂದಿದ್ದರು. ಆದರೆ ಒಂದು ದಶಕದ ನಂತರ ದೇಶದೆಲ್ಲೆಡೆ ಇದೇ ಮಾತು ಕೇಳಿಬರುತ್ತಿದೆ. ನಿರಂತರ ಪ್ರಯತ್ನದ ಫಲವಾಗಿ 2,30,000 ಸ್ಟಾರ್ಟ್ ಅಪ್ ಗಳಿವೆ ಎಂದು ಹೇಳಿದರು.
ಯಾವುದೇ ಪಕ್ಷವಿರಲಿ, ವಿಶ್ವದಲ್ಲಿ ಯಾವುದೇ ಸರಕಾರ ದೇಶದ ಎಲ್ಲ ಜನರಿಗೂ ಕೆಲಸ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಸ್ಟಾರ್ಟ್ ಅಪ್ ಕ್ಷೇತ್ರವು ಬಹುದೊಡ್ಟ ಉದ್ಯೋಗ ನೀಡುತ್ತದೆ ಎಂದು ಹೇಳಿದರು.
ಸ್ಟಾರ್ಟ್ ಅಪ್ ಯುಗ ಆರಂಭವಾದಾಗಿನಿಂದ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಫಲವಾಗಿ ಶಿಕ್ಷಣದ ವ್ಯಾಖ್ಯಾನವೇ ಬದಲಾಗಿದೆ. ಇಷ್ಟ ಇಲ್ಲದ ವಿಷಯಗಳನ್ನು ಓದುವ ಹಾಗೂ ಇಷ್ಟವಿಲ್ಲದಿದ್ದರೂ ಕೆಲಸಕ್ಕೆಂದು ಪಿಎಚ್‍ಡಿ ಮಾಡುವ ವಾಡಿಕೆ ಭಾರತದಲ್ಲಿದೆ. ಆದರೆ ಎನ್‍ಇಪಿ ಕಾರಣಕ್ಕೆ ಇದು ಬದಲಾಗಿದೆ. ಭವಿಷ್ಯದಲ್ಲಿ ಪಿಎಚ್‍ಡಿಗಳ ಸಂಖ್ಯೆ ಸಾಕಷ್ಟು ಕಡಿಮೆ ಆಗುತ್ತದೆ. ಹಾಗೂ ಅವುಗಳ ಗುಣಮಟ್ಟ ಹೆಚ್ಚಾಗುತ್ತದೆ. ಸ್ಟಾರ್ಟ್ ಅಪ್ ಅಂದರೆ ಬೆಂಗಳೂರಿನಂತಹ ಕೆಲವು ನಗರಗಳು ಹಾಗೂ ಐಟಿ ಎನ್ನುವಂತಿತ್ತು. ಆದರೆ ಈಗ ದೇಶದ ಶೇ.50 ಸ್ಟಾರ್ಟ್ ಅಪ್ ಗಳು ಮೂರನೇ ಹಂತದ ನಗರಗಳು ಹಾಗೂ ಐಟಿಯೇತರ ಕ್ಷೇತ್ರಗಳಿಂದಲೇ ಇವೆ ಎಂದು ತಿಳಿಸಿದರು.
ಇಸ್ರೊ ಅಧ್ಯಕ್ಷ ನಾರಾಯಣನ್ ಮಾತನಾಡಿ, ಇಸ್ರೋ ಸಾಧನೆಯು ಒಂದೇ ಸಂಸ್ಥೆಗೆ ಸೇರಿದ್ದಲ್ಲ. ನಮ್ಮ ಯೋಜನೆಗಳಲ್ಲಿ ಎನ್‍ಎಎಲ್ ಸೇರಿ ಅನೇಕ ಸಂಸ್ಥೆಗಳ ಸಹಭಾಗಿತ್ವ ಇರುತ್ತದೆ. ಈ ಸಹಭಾಗಿತ್ವ ಹೆಚ್ವಿಸಲು ಸಿಎಸ್‍ಐಆರ್ ಜೊತೆಗೆ ಇತ್ತೀಚೆಗೆ ಕಾರ್ಯಾಗಾರ ನಡೆಸಿ, 40 ತಂತ್ರಜ್ಞಾನಗಳನ್ನು ಗುರುತಿಸಿದ್ದೇವೆ. ಅದರಲ್ಲಿ 17 ತಂತ್ರಜ್ಞಾನದಲ್ಲಿ ಕೆಲಸ ಆರಂಭವಾಗಿದೆ. ಚಂದ್ರಯಾನದಲ್ಲಿ ಲ್ಯಾಂಡರ್ ಕೇವಲ 14 ದಿನ ಜೀವಂತವಾಗಿತ್ತು. ಇದೀಗ ಅಣು ಶಕ್ತಿ ಇಲಾಖೆ ಜೊತೆಗೆ ಸಹಭಾಗಿತ್ವದಿಂದ, ಈ ಅವಧಿಯನ್ನು 100-140 ದಿನಕ್ಕೆ ಹೆಚ್ಚಿಸುವ ಕೆಲಸ ಆಗುತ್ತಿದೆ ಎಂದರು.
2040ಕ್ಕೆ ಚಂದ್ರಯಾನ-4
ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇವಲ ಸರಕಾರದ ಹೂಡಿಕೆಯೊಂದನ್ನೇ ನೋಡಬಾರದು. ಇದರಲ್ಲಿ ಖಾಸಗಿ ಸಹಭಾಗಿತ್ವ ಬಹಳ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಕ್ಷೇತ್ರವು ಮುಂದೆ ಬಂದಿದೆ. ಇಸ್ರೋದ ಕಳೆದ 18 ಉಡಾವಣೆಗಳಲ್ಲಿ 16ರಲ್ಲಿ ಖಾಸಗಿ ಸಹಭಾಗಿತ್ವವಿದೆ. ಈಗಾಗಲೆ ಅಣು ವಿಜ್ಞಾನ ಕ್ಷೇತ್ರದಲ್ಲೂ ಹೂಡಿಕೆಗೆ ಭಾರತವಷ್ಟೇ ಅಲ್ಲದೇ ಅಮೆರಿಕದ ಹೂಡಿಕೆದಾರರೂ ಆಸಕ್ತಿ ತೋರಿಸಿದ್ದಾರೆ. ಚಂದ್ರಯಾನ-4 2040ಕ್ಕೆ ಆಗಬೇಕು ಎಂಬ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ನಿಟ್ಟಿನಲ್ಲಿ ಇಸ್ರೋ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಕಾರ್ಯಕ್ರಮ ನಂತರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.






