ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಶೋಷಿತ ಸಮುದಾಯಗಳ ಅಭಿವೃದ್ಧಿ : ಸಿ.ಎಸ್.ದ್ವಾರಕಾನಾಥ್

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಶತಮಾನಗಳಿಂದಲೂ ಶೋಷಣೆಗೊಳಗಾಗಿರುವ ಅಲೆಮಾರಿ, ಅರೆ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳು ಮೇಲೇಳಲು ಸಾಧ್ಯ ಎಂದು ಹಿರಿಯ ವಕೀಲ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಗಾಂಧಿಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ನಡೆದ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅಲೆಮಾರಿ ಹಾಗೂ ಆದಿವಾಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗ ಕರ್ನಾಟಕದಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ಕಾರ್ಯತಂತ್ರ ಶುರುವಾಗುತ್ತಿದೆ. ಆ ಪಟ್ಟಿಯಲ್ಲಿ ಅಲೆಮಾರಿಗಳ, ಆದಿವಾಸಿಗಳ ಹೆಸರುಗಳಿವೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಎಸ್‌ಐಆರ್ ಮಾಡುವ ವೇಳೆ 13 ದಾಖಲಾತಿಗಳನ್ನು ಕೇಳುತ್ತಾರೆ. ಈ ದಾಖಲೆಗಳಿದ್ದರೆ ನಮ್ಮ ಮತದಾನದ ಹಕ್ಕು ಉಳಿಯುತ್ತದೆ. ಕೊನೆ ಪಕ್ಷ ಈ ದಾಖಲೆಗಳಲ್ಲಿ ಯಾವುದಾದರೂ ಎರಡು ಇರಬೇಕಾಗುತ್ತದೆ. ಅದರಲ್ಲಿ ಒಂದು ವಾಸಸ್ಥಳ, ಮತ್ತೊಂದು ಜಾತಿ ದೃಢೀಕರಣ ಪತ್ರ ಇರಬೇಕು. ಆದರೆ, ಅಲೆಮಾರಿ, ಆದಿವಾಸಿಗಳಿಗೆ ನಿರ್ದಿಷ್ಟ ಸ್ಥಳವೂ ಇಲ್ಲ, ಮನೆಯೂ ಇಲ್ಲ. ಈ ಸಮುದಾಯಗಳ ಜಾತಿ ದೃಢೀಕರಣವಂತೂ ಗೊಂದಲದಲ್ಲಿದೆ. ಹೀಗಿದ್ದಾಗ ನಮ್ಮ ಮತಗಳ ಹಕ್ಕನ್ನು ಪಡೆಯುವುದೇಗೆ ಎಂಬುದೇ ಪ್ರಶ್ನೆಯಾಗಿದೆ ಎಂದು ದ್ವಾರಕಾನಾಥ್ ಆತಂಕ ವ್ಯಕ್ತಪಡಿಸಿದರು.
ನಮ್ಮ ಹೋರಾಟಗಳಿಗೆ ಅಂಬೇಡ್ಕರ್ ಅವರ ದಾರಿ ಬೇಕಾಗಿದೆ. ಅವರ ನೀಡಿದ ಸಂವಿಧಾನ ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಮಾರ್ಗದರ್ಶನವಾಗಿದೆ. ಸಣ್ಣ ಸಣ್ಣ ಸಮುದಾಯಗಳ ಮಕ್ಕಳು ನೂರಾರು ಸಮಸ್ಯೆಗಳ ನಡುವೆಯೇ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವುದು ದೊಡ್ಡ ಸಾಧನೆ. ಈ ಮಕ್ಕಳು ಶಿಕ್ಷಣ ಪಡೆದುಕೊಂಡು ಉನ್ನತ ಸ್ಥಾನಗಳಿಗೆ ಏರಬೇಕು. ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ದ್ವಾರಕಾನಾಥ್ ತಿಳಿಸಿದರು.ಕಾರ್ಯಕ್ರಮದಲ್ಲಿ ಪತ್ರಕರ್ತ ರಂಗನಾಥ್ ಭಾರದ್ವಾಜ್, ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಉಪಸ್ಥಿತರಿದ್ದರು.






