ಗುರುದಕ್ಷಿಣೆ ಹೆಸರಿನಲ್ಲಿ ಅಕ್ರಮ ಹಣ ಸಂಗ್ರಹ ಆರೋಪ; ಸಂಘಪರಿವಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವ, ಡಿಜಿ-ಐಜಿಪಿಗೆ ಪತ್ರ

ಗೃಹ ಸಚಿವ ಪ್ರಿಯಾಂಕ್ ಖರ್ಗೆ (Photo: X)
ಬೆಂಗಳೂರು : ಆರೆಸ್ಸೆಸ್ನ ಅಂಗಸಂಸ್ಥೆಗಳಾದ ರಾಷ್ಟ್ರ ಸೇವಿಕಾ ಸಮಿತಿ, ಬಜರಂಗದಳ, ದುರ್ಗಾವಾಹಿನಿ, ಹಿಂದೂ ಜಾಗರಣ ವೇದಿಕೆ ಮುಂತಾದವು ಗುರುದಕ್ಷಿಣೆ ಹೆಸರಿನಲ್ಲಿ ಶಾಖಾವಾರು ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದು, ಇದರ ಬಗ್ಗೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಗುರುವಾರ ಪತ್ರ ಬರೆದಿದ್ದಾರೆ.
ಸಂಘಪರಿವಾರದ ಅಂಗ ಸಂಸ್ಥೆಗಳು ಗುರುದಕ್ಷಿಣೆ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲು ಗುರುಪೂಜಾ ಕಾರ್ಯಕ್ರಮಗಳನ್ನು ಒಂದು ತಿಂಗಳು ನಡೆಸುತ್ತಾರೆ. ಇಂತಹ ಯಾವುದೇ ಸಂಘ ಸಂಸ್ಥೆಗಳ ಯಾವುದೇ ಕಾರ್ಯಕ್ರಮಗಳು ಅಕ್ರಮವಾಗಿ ನಡೆಯದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಂಘಪರಿವಾರದ ಅಥವಾ ಬೇರೆ ಯಾವುದೇ ಸಂಘ ಸಂಸ್ಥೆಗಳ ಎಲ್ಲ ರೀತಿಯ ಕಾರ್ಯಕ್ರಮಗಳಿಗೂ ಸಂವಿಧಾನ ಮತ್ತು ಕಾನೂನಿನ ಅಡಿ ಅನುಮತಿ ಕಡ್ಡಾಯಗೊಳಿಸಬೇಕು. ಆರೆಸ್ಸೆಸ್ನ ಗುರುಪೂಜೆ ಗುರುದಕ್ಷಿಣೆಯ ಬಗ್ಗೆ ವಿಶೇಷ ನಿಗಾವಹಿಸಿ ಅಕ್ರಮ ಹಣ ಸಂಗ್ರಹಕ್ಕೆ ಕಡಿವಾಣ ಹಾಕುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎನ್.ಹನುಮೇಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.




