‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‍ಗಾರ್ ಯೋಜನೆ’ಯ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ

ಬೆಂಗಳೂರು : ಕೃಷಿ ಮತ್ತು ಕೈಗಾರಿಕೆ ದೇಶದ ಬೆನ್ನೆಲುಬು ಇದ್ದ ಹಾಗೇ, ಎರಡೂ ಒಟ್ಟಾಗಿ ಇದ್ದಾಗ ಮಾತ್ರ ದೇಶ ಮುನ್ನಡೆ ಸಾಧಿಸುತ್ತದೆ. ಇಲ್ಲದಿದ್ದರೆ ಪ್ರತೀ ವಸ್ತುವಿಗೂ ನಾವು ಬೇರೆ ಬೇರೆ ದೇಶಗಳನ್ನು ಅವಲಂಭಿಸಬೇಕಾಗುತ್ತದೆ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಕಚೇರಿಯ ವತಿಯಿಂದ ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‍ಗಾರ್ ಯೋಜನೆ’ಯ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಸಾವಿರಾರು ಕೋಟಿ ರೂ.ಗಳಷ್ಟು ಹಣ ಅನೇಕ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ, ಎರಡು ತುಂಬಾ ಮುಖ್ಯ. ರೈತರನ್ನು ಹಾಗೂ ಉದ್ಯೋಗದಾತರನ್ನು ಶಕ್ತಿಯುತರನ್ನಾಗಿ ಮಾಡುವ ಕೆಲಸ ಆಗಬೇಕಿದೆ ಎಂದು ಸತೀಶ್ ರೆಡ್ಡಿ ತಿಳಿಸಿದರು.
ಈ ಹಿಂದೆ ಪಿಎಫ್ ಎಂದರೆ ಒಂದು ದೊಡ್ಡ ತಲೆ ನೋವು ಆಗುತ್ತಿತ್ತು. ಈಗ ಕೇಂದ್ರ ಸರಕಾರವೇ ಪಿಎಂ ವಿಬಿಆರ್ ವೈ ಅಡಿಯಲ್ಲಿ ಒಬ್ಬ ಹೊಸ ಉದ್ಯೋಗಿಯ ಹೆಸರಿನಲ್ಲಿ 15ಸಾವಿರ ರೂ. ಠೇವಣಿ ಇಡಲಾಗುತ್ತದೆ. ಪಿಎಂ ವಿಬಿಆರ್ ವೈಯಿಂದ ಕೈಗಾರಿಕೆಗಳ ಬೆಳವಣಿಗೆ ಆಗುತ್ತದೆ. 1ರಿಂದ 2ವರ್ಷಗಳಲ್ಲಿ 3.50 ಕೋಟಿಗಿಂತ ಹೆಚ್ಚು ಉದ್ಯೋಗಗಳು ಸೃಷ್ಠಿಯಾಗುತ್ತವೆ ಎನ್ನುವ ಮುನ್ನೋಟ ಇದೆ. ಕಾರ್ಮಿಕರು ಮತ್ತು ಉದ್ಯೋಗದಾತ ಇಬ್ಬರೂ ದೇಶಕ್ಕೆ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.
ಒಬ್ಬ ಉದ್ಯೋಗದಾತ ಇಲ್ಲದಿದ್ದರೆ, ಉದ್ಯೋಗ ಸೃಷ್ಠಿಯಾಗುವುದಿಲ್ಲ. ಆದ್ದರಿಂದ ಉದ್ಯೋಗದಾತರಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬೆಂಬಲ ನೀಡಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಉದ್ಯೋಗ ಕೊಡುವುದರ ಜೊತೆಗೆ ಉದ್ಯೋಗ ಸೃಷ್ಠಿಸುವ ಅನೇಕ ಕೈಗಾರಿಕೆಗಳನ್ನು ದೇಶಕ್ಕೆ, ರಾಜ್ಯಕ್ಕೆ ತರುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಸುನಿಲ್ ಕುಮಾರ್, ಸೇಂಟ್ ಫ್ರಾನ್ಸಿಸ್ ಪಿಯು ಕಾಲೇಜಿನ ನಿರ್ದೇಶಕ ಡಾ.ಟೈಟಸ್ ಮತ್ತಿತರರು ಉಪಸ್ಥಿತರಿದ್ದರು.






