ಎಸ್ಐಆರ್ ಪ್ರಕ್ರಿಯೆ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ: ಮುಹಮ್ಮದ್ ಉಬೇದುಲ್ಲಾ ಶರೀಪ್ ಮನವಿ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ರಾಜ್ಯದಲ್ಲಿ ಜೂ.30 ರಿಂದ ಜು.29ರ ವರೆಗೆ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್.ಐ.ಆರ್)ಯ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಮನವಿ ಮಾಡಿದರು.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಕುರಿತು ಮಾಹಿತಿ ಒದಗಿಸುವ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜೂ.30 ರಿಂದ ಜು.29ರವರೆಗೆ ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬ ಮತದಾರನಿಗೂ ಪೂರ್ವ ಮುದ್ರಿತ ಅರ್ಜಿ ನಮೂನೆಯನ್ನು ನೀಡುತ್ತಾರೆ. ಅದರಲ್ಲಿ 2025-26ನೆ ಸಾಲಿನ ಮತದಾರರ ಪಟ್ಟಿಯಲ್ಲಿರುವ ನಿಮ್ಮ ಮಾಹಿತಿ ಮುದ್ರಿತವಾಗಿರುತ್ತದೆ. ಅದನ್ನು ಮೊದಲು ಪರಿಶೀಲಿಸಬೇಕು ಎಂದು ಹೇಳಿದರು.
ಎನುಮರೇಷನ್ ಅರ್ಜಿಯಲ್ಲಿ 2002ರ ಮತದಾರರ ಪಟ್ಟಿಯಲ್ಲಿರುವಂತೆ ನಿಮ್ಮ ಹೆಸರು, ವಿಧಾನಸಭಾ ಕ್ಷೇತ್ರದ ಹೆಸರು, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಹೀಗೆ ಎಲ್ಲ ಮಾಹಿತಿಯನ್ನು ತುಂಬಬೇಕು. ಆನಂತರ, ಆಗಸ್ಟ್ 5ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಆಗಸ್ಟ್ 5 ರಿಂದ ಸೆಪ್ಟಂಬರ್ 4ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.
ಒಂದು ವೇಳೆ 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಬಿಎಲ್ಒಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ದಾಖಲೆಗಳನ್ನು ನೀಡಿದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಪೋಷಕರ ಮತದಾರರ ಪಟ್ಟಿಯ ವಿವರ ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದು. ಆದರೆ, ಯಾವುದೆ ಕಾರಣಕ್ಕೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸದೆ ನಿರ್ಲಕ್ಷ್ಯ ತೋರಬಾರದು ಎಂದು ಉಬೇದುಲ್ಲಾ ಶರೀಫ್ ಮನವಿ ಮಾಡಿದರು.
ಅಂಜುಮನ್ ಎ ತರಖ್ಖಿ ಉರ್ದು ಹಿಂದ್ ರಾಜ್ಯ ಉಪಾಧ್ಯಕ್ಷ ಸೈಯದ್ ಅಶ್ರಫ್ ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಹೊಸ ಮತದಾರರನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. 1987ರ ಜು.1ಕ್ಕಿಂತ ಮುನ್ನ ಜನಿಸಿದವರು ಅರ್ಜಿ ನಮೂನೆ ಸಂಖ್ಯೆ 6, ಸ್ವಯಂದೃಢೀಕರಿಸಿದ ಜನ್ಮ ದಿನಾಂಕ ಹಾಗೂ ಸ್ಥಳದ ವಿವರ ನೀಡಬೇಕು. 1987ರ ಜು.1 ರಿಂದ 2004ರ ಡಿ.2ರ ನಡುವೆ ಜನಿಸಿದವರು ಅರ್ಜಿ ನಮೂನೆ ಸಂಖ್ಯೆ 6, ಎನುಮರೇಷನ್ ಅರ್ಜಿ, ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಹಾಗೂ ಸ್ಥಳದ ವಿವರ ನೀಡಬೇಕು. 2004ರ ಡಿ.2ರ ನಂತರ ಜನಿಸಿದವರು ಅರ್ಜಿ ನಮೂನೆ ಸಂಖ್ಯೆ 6, ಎನುಮರೇಷನ್ ಅರ್ಜಿ, ತಂದೆ ಹಾಗೂ ತಾಯಿಯ ಜನ್ಮ ದಿನಾಂಕ ಮತ್ತು ಸ್ಥಳದ ವಿವರ ನೀಡಬೇಕು ಎಂದು ಹೇಳಿದರು.
ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಜನ್ಮ ಪ್ರಮಾಣ ಪತ್ರ, ಪಾಸ್ಪೋರ್ಟ್, ಮೆಟ್ರಿಕ್ಯೂಲೇಷನ್/ಎಸೆಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಪ್ರಮಾಣ ಪತ್ರ, ಸರಕಾರಿ ನೌಕರರ ಗುರುತಿನ ಚೀಟಿ ಅಥವಾ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ, ಬ್ಯಾಂಕ್, ಸ್ಥಳೀಯ ಸಂಸ್ಥೆಗಳು, ಅಂಚೆ ಕಚೇರಿ, ಎಲ್ಪಿಜಿ ಏಜೆನ್ಸಿ ಅಥವಾ ಸರಕಾರಿ ಸ್ವಾಮ್ಯದ ಯಾವುದೆ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿಯನ್ನು ಬಳಸಬಹುದು ಎಂದು ಅವರು ತಿಳಿಸಿದರು.
ಇದಲ್ಲದೆ, ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ, ಅರಣ್ಯ ಹಕ್ಕುಗಳ ಪ್ರಮಾಣಪತ್ರ, ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರ, ಸರಕಾರದಿಂದ ಜಮೀನು, ಮನೆ ಹಂಚಿಕೆ ಮಾಡಿರುವ ಪ್ರಮಾಣ ಪತ್ರವನ್ನು ದಾಖಲೆಯಾಗಿ ಚುನಾವಣಾ ಆಯೋಗ ಸ್ವೀಕರಿಸಲಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಅಲ್ಲಿನ ಸರಕಾರ ಎಸ್ಐಆರ್ ಸಂದರ್ಭದಲ್ಲಿ ಎಲ್ಲರಿಗೂ ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರವನ್ನು ಕಾಲಮಿತಿಯಲ್ಲಿ ಒದಗಿಸಿದ ಕಾರಣಕ್ಕಾಗಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರು ಕೈ ಬಿಟ್ಟು ಹೋಗಿಲ್ಲ. ಇಲ್ಲಿಯೂ ಸಹ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಎಲ್ಲ ನಿವಾಸಿಗಳಿಗೆ ತಹಶೀಲ್ದಾರ್ಗಳ ಮೂಲಕ ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರವನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸೈಯದ್ ಅಶ್ರಫ್ ಆಗ್ರಹಿಸಿದರು.
ಮಸೀದಿಗಳ ಆಡಳಿತ ಸಮಿತಿಗಳು, ಶಾಸಕರು, ಜನಪ್ರತಿನಿಧಿಗಳು ಎಸ್ಐಆರ್ ಬಗ್ಗೆ ವಿಶೇಷ ಗಮನ ಹರಿಸಿ, ಯಾವೊಬ್ಬ ಅರ್ಹ ಮತದಾರನು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಬಿಎಲ್ಒಗಳಿಂದ ಮನೆ ಮನೆ ಭೇಟಿ: ಜೂನ್ 30 ರಿಂದ ಜುಲೈ 29.
ಮತಗಟ್ಟೆಗಳನ್ನು ತರ್ಕಬದ್ಧಗೊಳಿಸುವುದು: ಜುಲೈ 29.
ಕರಡು ಮತದಾರರ ಪಟ್ಟಿ ಪ್ರಕಟ: ಆಗಸ್ಟ್ 5.
ಆಕ್ಷೇಪಣೆಗಳು ಹಾಗೂ ಕ್ಲೇಮುಗಳ ಸಲ್ಲಿಕೆ: ಆಗಸ್ಟ್ 5 ರಿಂದ ಸೆಪ್ಟಂಬರ್ 4.
ನೋಟಿಸ್ಗಳು ನೀಡುವುದು ಹಾಗೂ ಆಕ್ಷೇಪಣೆಗಳು ಹಾಗೂ ಕ್ಲೇಮುಗಳ ವಿಲೆ: ಆಗಸ್ಟ್ 5 ರಿಂದ ಅಕ್ಟೋಬರ್ 3
ಅಂತಿಮ ಮತದಾರರ ಪಟ್ಟಿ ಪ್ರಕಟ: ಅಕ್ಟೋಬರ್ 7.






