ಕೆಂಪೇಗೌಡರು ಜನ ಕಲ್ಯಾಣಕ್ಕಾಗಿ ಆಡಳಿತ ನಡೆಸಿದ ನಾಯಕ : ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ಬೆಂಗಳೂರು : ಕೆಂಪೇಗೌಡರನ್ನು ಕೇವಲ ಒಬ್ಬ ಆಡಳಿತಗಾರನಾಗಿ ಮಾತ್ರವಲ್ಲದೆ, ಜನರ ಕಲ್ಯಾಣಕ್ಕಾಗಿ ದೂರದೃಷ್ಟಿಯನ್ನಿಟ್ಟುಕೊಂಡು ಆಡಳಿತ ನಡೆಸಿದ ನಾಯಕರನ್ನಾಗಿ ಸ್ಮರಿಸಲಾಗುತ್ತದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತಿಳಿಸಿದರು.
ಶನಿವಾರ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಕೆಂಪೇಗೌಡರ 517ನೆ ಜಯಂತ್ಯುತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತರು, ವ್ಯಾಪಾರಿಗಳು, ಕುಶಲಕರ್ಮಿಗಳು, ವಿದ್ವಾಂಸರು ಮತ್ತು ವಿವಿಧ ಧರ್ಮಗಳ ಜನರು ಒಟ್ಟಾಗಿ ಬದುಕುವ ಮತ್ತು ಸಮೃದ್ಧಿ ಹೊಂದುವಂತಹ ಅಂತರ್ಗತ ನಗರವನ್ನು ಕೆಂಪೇಗೌಡರು ಕಲ್ಪಿಸಿಕೊಂಡಿದ್ದರು. ಅಲ್ಲದೆ, ಇಂದಿನ ಬೆಂಗಳೂರು ಆ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ನಿಜವಾದ ‘ಸಣ್ಣ ಭಾರತ’ ಆಗಿದೆ ಎಂದು ಉಪರಾಷ್ಟ್ರಪತಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ನಿರ್ಮಲಾನಂದನಾಥ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




