ಸತ್ಯಾಸತ್ಯತೆಯ ಶೋಧನೆಯೇ ‘ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ-ಟಿಪ್ಪು ಸುಲ್ತಾನ್’: ಡಾ.ಎಸ್.ಕೆ.ಅರುಣಿ

ಬೆಂಗಳೂರು : ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕೃತಿಯು ಸತ್ಯಾಸತ್ಯತೆಯ ಶೋಧನೆಯಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್‍ನ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಕೆ.ಅರುಣಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಎಂಬೆಸಿ ಸೆಂಟರ್‍ನಲ್ಲಿರುವ ಹೊಸತು ಅಂಗಳದಲ್ಲಿ ಹೊಸತು ಪತ್ರಿಕೆಯ ವತಿಯಿಂದ ಆಯೋಜಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರ ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯ ಕುರಿತ ತಿಂಗಳ ಓದು ಸಂವಾದಲ್ಲಿ ಅವರು ಮಾತನಾಡಿದರು.
‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯ ಮೂಲಕ ನವೀನ್ ಸೂರಿಂಜೆ ಅವರು ಕರಾವಳಿಗೆ ಸಂಬಂಧಪಟ್ಟಂತೆ ಚರಿತ್ರೆಯನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯ ಕಾಲಘಟ್ಟ ಎಂದು ಹೇಳಿದರೂ ಕೂಡ, ಪ್ರಾಚೀನ ಹಾಗೂ ಮಧ್ಯಕಾಲೀನ ಚರಿತ್ರೆಗೂ ತೆಗೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಯಾವ ರೀತಿಯಾಗಿ ಪ್ರಗತಿಶೀಲ ಧೋರಣೆ ಹೊಂದಿದ್ದ, ಆರಂಭದಲ್ಲಿದ್ದ ಟಿಪ್ಪು ಕೊನೆಯ ಹಂತಕ್ಕೆ ಬರುವವರೆಗೆ ಪ್ರಜಾಪ್ರಭುತ್ವದ ಹಾದಿಯನ್ನು ಗುರುತಿಸಲು ಪ್ರಯತ್ನ ಮಾಡಿದ ಬಗ್ಗೆ ಹಾಗೂ ಜನಹಿತ ಕೆಲಸಗಳನ್ನು ಮಾಡಲು ಪ್ರಾರಂಭ ಮಾಡಿರುವ ಕುರಿತು ‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿಯಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಕರ್ನಾಟಕ ಚರಿತ್ರೆಯಲ್ಲಿ ಕರಾವಳಿಯ ಚರಿತ್ರೆ ಗೌಣವಾಗಿದ್ದು, ಕರಾವಳಿಯ ಸ್ಥಳೀಯ ಚರಿತ್ರೆಯನ್ನು ಚಿಕ್ಕ ಚಿಕ್ಕ ಲೇಖನಗಳ ಮೂಲಕ ನವೀನ್ ಸೂರಿಂಜೆ ಅವರು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ,‘ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಪುಸ್ತಕವನ್ನು ಚಳವಳಿ ದೃಷ್ಠಿಯಿಂದಲೇ ಬರೆದಿರುವುದು. ಕರಾವಳಿಯಲ್ಲಿರುವ ಕೋಮುವಾದವನ್ನು ಮುಖ್ಯವಾಗಿಟ್ಟುಕೊಂಡೇ ಬರೆಯಲಾಗಿದೆ. ಸಾಮಾನ್ಯ ಜನರಿಗೆ ಅರ್ಥವಾಗಲಿ ಎಂದು ಸರಳವಾದ ಭಾಷೆಯಲ್ಲಿ ಬರೆದಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮತ್ತಿತರರು ಹಾಜರಿದ್ದರು.






