ರಾಮ ಮಂದಿರ ಹುಂಡಿ ಹಣ ಕಳವು ಪ್ರಕರಣ: ಪ್ರಧಾನಿ ಮೋದಿ, ಆದಿತ್ಯನಾಥ್ ರಾಜೀನಾಮೆಗೆ ‘ಕೈ’ ಕಾರ್ಯಕರ್ತರ ಆಗ್ರಹ

ಬೆಂಗಳೂರು : ಅಯೋಧ್ಯೆಯ ರಾಮ ಮಂದಿರದ ಹುಂಡಿ ಹಣದ ಕಳವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಾಗೂ ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಸೋಮವಾರ ನಗರದ ಗಾಂಧಿ ಪ್ರತಿಮೆಯ ಬಳಿ ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಮನ ಭಕ್ತರು ಸಲ್ಲಿಸಿದ ದೇಣಿಗೆ ಕಳವಾಗಲು ಆದ ಆಡಳಿತಾತ್ಮಕ ವೈಫಲ್ಯಗಳಿಗೆ ಯಾರು ಹೊಣೆ? ದೇವಸ್ಥಾನದ ಹುಂಡಿ ಹಣದ ಸುರಕ್ಷತೆಯಲ್ಲಿ ಲೋಪಗಳಾಗಿದ್ದರೆ, ಅದರ ಬಗ್ಗೆ ಸರಕಾರ ಮತ್ತು ಸಂಬಂಧಿತ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ?. ಪ್ರಕರಣದ ಸಂಪೂರ್ಣ ಸತ್ಯ ದೇಶದ ಜನತೆಗೆ ತಿಳಿಯುವಂತೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ಸರಕಾರ ಸಿದ್ಧವೇ? ಎಂದು ಪ್ರಶ್ನಿಸಿದರು.
ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಯಾವುದೇ ರಾಜಕೀಯ ಅಥವಾ ಸಂಘಟನಾತ್ಮಕ ಪ್ರಭಾವವಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೇ? ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಜೊತೆಗೆ, ಪ್ರಕರಣದ ನೈತಿಕ ಹೊಣೆಗಾರಿಕೆಯನ್ನು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ತನಿಖೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಸುಪ್ರೀಂ ಕೋರ್ಟ್‍ನ ಮೇಲ್ವಿಚಾರಣೆಯಲ್ಲಿ ಅಥವಾ ಸ್ವತಂತ್ರ ವಿಶೇಷ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾವುದೇ ಪಕ್ಷ, ಸಂಘಟನೆ ಅಥವಾ ಹುದ್ದೆಗೆ ಸೇರಿದವರಾಗಿದ್ದರೂ, ಅವರಿಗೆ ಕಠಿಣ ಶಿಕ್ಷೆಯಾಗಬೇಕು. ರಾಮನ ಹೆಸರಿನಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಅನಂತ್ ಕುಮಾರ್ ಎಂ.ಎಸ್, ಜಿ.ಜನಾರ್ದನ್, ಆದಿತ್ಯ, ಆನಂದ್, ಚಿನ್ನಿ ಪ್ರಕಾಶ್, ಕುಶಲ್ ಹರವೇಗೌಡ, ಪುಟ್ಟರಾಜು, ರಂಜಿತ್, ಪವನ್, ಪ್ರವೀಣ್ ರಾವ್, ಚಂದ್ರು, ನವೀನ್, ಸುರೇಶ್ ಮತ್ತಿತರರು ಹಾಜರಿದ್ದರು.






