ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು : ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಪಕ್ಷದಿಂದ ಉಚ್ಛಾಟನೆ ಮಾಡಲಾಡಲಾಗಿದೆ.
ಯಲಹಂಕ ಕ್ಷೇತ್ರದ ಬಿಜೆಪಿ ನಾಯಕ ಹಾಗೂ ಬಮೂಲ್ ನಿರ್ದೇಶಕರಾಗಿರುವ ಸತೀಶ್ ಕಡತನಮಲೆ ಅವರು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆ ಅವರನ್ನು 6 ವರ್ಷ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ತಿಳಿಸಿದ್ದಾರೆ.
ಸತೀಶ್ ಕಡತನಮಲೆ ಅವರು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧವೇ ಮಾತನಾಡಿದ್ದರು. ಜತೆಗೆ ಕಾಂಗ್ರೆಸ್ ನಾಯಕರ ಜತೆ ಸಂಪರ್ಕದಲ್ಲಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಸ್ವಪಕ್ಷೀಯರ ವಿರುದ್ಧ ಮಾತನಾಡಿ ಪಕ್ಷದ ಘನತೆಗೆ ಧಕ್ಕೆ ತಂದಿದ್ದಾರೆ ಎಂಬ ಕಾರಣಕ್ಕೆ ಸ್ಥಳೀಯ ನಾಯಕರು ಪಕ್ಷದ ರಾಜ್ಯ ಶಿಸ್ತು ಸಮಿತಿಗೆ ಹಿರಿಯರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಪಕ್ಷವು ಸತೀಶ್ ಕಡತನಮಲೆಗೆ ನೋಟಿಸ್ ನೀಡಿತ್ತು. ಜತೆಗೆ ಸ್ಪಷ್ಟೀಕರಣ ಕೇಳಿತ್ತು. ಆ ಬಳಿಕ ಅವರು ಸಮಜಾಯಿಷಿ ನೀಡಿದ್ದರು. ಆದರೆ, ಪಕ್ಷವು ಮಾನ್ಯ ಮಾಡದೇ, ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.




