ಆಷಾಡ ಆರಂಭಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಣೆ : ಶಾಸಕ ಷಡಕ್ಷರಿ

ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಷಾಢ ಆರಂಭವಾಗುವ ಮುನ್ನವೇ ಆಗುವ ಸಾಧ್ಯತೆಗಳಿವೆ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಜು.14 ರೊಳಗಾಗಿಯೇ ಸಂಪುಟ ವಿಸ್ತರಣೆಯಾಗಬಹುದು ಎಂಬ ವಿಶ್ವಾಸವಿದೆ. ಒಂದು ವೇಳೆ ಸಾಧ್ಯವಾಗದೇ ಇದ್ದರೆ, ಆಷಾಢ ಬಳಿಕ ಶ್ರಾವಣದಲ್ಲಿ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.
ಪೂರ್ಣ ಪ್ರಮಾಣದ ಸಂಪುಟ ಇಲ್ಲದೇ ಇರುವುದರಿಂದ ಕೆಲಸ ಮಾಡಲು ಅನಾನುಕೂಲಗಳಾಗುತ್ತಿವೆ. ಸಚಿವರ ಸಂಖ್ಯೆ ಕಡಿಮೆ ಇದೆ, ಖಾತೆಗಳ ಸಂಖ್ಯೆ ಹೆಚ್ಚಿವೆ. ಅನುಭವ ಇರುವ ಶಾಸಕರುಗಳಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ ಎಂದ ಅವರು, ಸಂಪುಟಕ್ಕೆ ಯಾರನ್ನೆಲ್ಲಾ ಸೇರಿಸಿಕೊಳ್ಳಬೇಕೆಂಬ ಚರ್ಚೆ ನಡೆದು ತೀರ್ಮಾನವಾಗಿದೆ. ಅದರ ಮಾಹಿತಿ ನಮಗೆ ದೊರೆತ್ತಿದೆ. ಆದರೆ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ, ತೆರೆಮರೆಯಲ್ಲಿ ನಮ್ಮ ಪ್ರಯತ್ನಗಳು ಮುಂದುವರೆದಿವೆ ಎಂದರು.




