ಬಿಟ್ ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಜಾರಿ ನಿರ್ದೇಶನಾಲಯವು(ಈಡಿ) ಬಿಟ್ ಕಾಯಿನ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಆಗಿರುವ ಶ್ರೀಕಿ ಸೇರಿ ಮೂವರು ಆರೋಪಿಗಳ ವಿರುದ್ಧ 3,500 ಪುಟಗಳ ದೋಷಾರೋಪಣಾ ಪಟ್ಟಿಯನ್ನು ನಗರದ ಪಿಎಂಎಲ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಬಿಟ್ ಕಾಯಿನ್ ಹಗರಣದ ಆರೋಪಿಗಳಾದ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೆವಾಲಾ ಅವರ ವಿರುದ್ಧ ಈಡಿ ದಾಳಿ ನಡೆಸಿ, ಮೂವರ ವಿರುದ್ದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಕರಣವನ್ನು ತನಿಖೆ ನಡೆಸಿದ್ದ ಈಡಿ ಅಧಿಕಾರಿಗಳು, ಮೇ ತಿಂಗಳಲ್ಲಿ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೆವಾಲಾ ಅವರನ್ನು ಬಂಧಿಸಿದ್ದರು. ಈಗ ಈ ಮೂವರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಕಲೆ ಹೊಂದಿದ್ದ ಶ್ರೀಕಿ, ಕರ್ನಾಟಕ ಸರಕಾರದ ಇ - ಪ್ರೊಕ್ಯೂರ್ಮೆಂಟ್ ಜಾಲತಾಣವನ್ನು ಹ್ಯಾಕ್ ಮಾಡಿ 11.5 ಕೋಟಿ ರೂ. ಲಪಾಟಿಯಿಸಿದ್ದಾರೆ ಎಂದು ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ರಾಜಕೀಯ ನಂಟು ಹೊಂದಿರುವ ಉದ್ಯಮಿ ಸುನೀಶ್ ಹೆಗ್ಡೆ, ಶ್ರೀಕಿಯ ಐಷರಾಮಿ ಜೀವನಕ್ಕೆ ಹಣಕಾಸಿನ ನೆರವು ಒದಗಿಸಿದ್ದನು. ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವಂತೆ ಒತ್ತಾಯಿಸಿದ್ದನು. ಹ್ಯಾಕ್ ಆದ ಕಂಪೆನಿಗಳಿಂದ ಮಾತುಕತೆ ನಡೆಸಿ 2 ಕೋಟಿ ರೂ. ಹಣ ಹಾಗೂ ಕ್ಯಾಸಿನೋ ಚಿಪ್ಗಳು, ವರ್ಚುಯಲ್ ಸ್ವತ್ತುಗಳಿಗೆ ಬೇಡಿಕೆ ಇರಿಸಿದ್ದನು ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.






