ಕೆಪಿಎಸ್ ಶಾಲೆಗಳ ಕಾರ್ಪೊರೇಟೀಕರಣ ಖಂಡನೀಯ : ಸಾರ್ವಜನಿಕ ಶಿಕ್ಷಣ ಉಳಿಸಿ ರಾಜ್ಯ ಸಮಿತಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ಪಬ್ಲಿಕ್ ಶಾಲೆಗಳ ಕಾರ್ಪೊರೇಟೀಕರಣ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿ ಖಂಡನೀಯ ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ರಾಜ್ಯ ಸಮಿತಿ ತಿಳಿಸಿದೆ.
ಈ ಕುರಿತು ವಿಶ್ರಾಂತ ಕುಲಪತಿ ಪ್ರೊ ಎ.ಮುರಿಗೆಪ್ಪ, ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ, ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ, ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಹಿರಿಯ ಹೋರಾಟಗಾರ ಎಸ್.ಆರ್.ಹಿರೇಮಠ, ಡಾಹೇಮಾ ಪಟ್ಟಣಶೆಟ್ಟಿ, ರೂಪ ಹಾಸನ, ಉಗ್ರನರಸಿಂಹೇಗೌಡ, ಪ್ರೊ.ಕಿರಣ ಗಾಜನೂರು, ಅಶೋಕ್ ಚಂದರಗಿ, ಎಐಡಿಎಸ್ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಅವರು ಪ್ರಕಟನೆ ನೀಡಿದ್ದಾರೆ.
ರಾಜ್ಯ ಸರಕಾರವು ಜೂ.18ರಂದು ಹೊರಡಿಸಿರುವ ಸರಕಾರಿ ಆದೇಶ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಂಬಂಧಿಸಿದಂತೆ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮಾರ್ಗಸೂಚಿಗಳ ಹೆಸರಿನಲ್ಲಿ ಇಡೀ ಸರಕಾರಿ ಶಾಲಾ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪೆನಿಗಳ ಪಾದದಡಿಗೆ ಇಡಲು ಹೊರಟಿರುವುದು ಅತ್ಯಂತ ಆತಂಕಕಾರಿ ಮತ್ತು ಖಂಡನಾರ್ಹ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶದ ಪ್ರಕಾರ, ರಾಜ್ಯದ 1,000 ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸುವ ನೆಪದಲ್ಲಿ ಕಾರ್ಪೊರೇಟ್ ಹೂಡಿಕೆಯನ್ನು ಮುಕ್ತವಾಗಿ ಆಹ್ವಾನಿಸಲಾಗುತ್ತಿದೆ. ಇದು ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಗೆ ಸೀಮಿತವಾಗಿರದೆ, ಶಾಲೆಯ ಆಡಳಿತ, ಪಠ್ಯಕ್ರಮ ಮತ್ತು ಬೋಧನಾ ಪ್ರಕ್ರಿಯೆಯಲ್ಲಿ ನೇರ ಬಂಡವಾಳಶಾಹಿಗಳ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
ಸರಕಾರಿ ಶಾಲೆಗಳ ಆವರಣದಲ್ಲಿ ಖಾಸಗಿ ಕಂಪೆನಿಗಳ ಸಹ-ಬ್ರ್ಯಾಂಡಿಂಗ್ ಮಾಡಲು, ಅಂದರೆ ಸರಕಾರಿ ಶಾಲೆಯ ಹೆಸರಿನೊಂದಿಗೆ ಕಂಪೆನಿಯ ಹೆಸರನ್ನು ಸೇರಿಸಲು ಅನುಮತಿ ನೀಡಿರುವುದು ಸಾರ್ವಜನಿಕ ಸ್ವತ್ತನ್ನು ಕಂಪೆನಿಗಳ ಜಾಹೀರಾತು ಫಲಕಗಳನ್ನಾಗಿ ಪರಿವರ್ತಿಸುವ ತಂತ್ರವಾಗಿದೆ. ಶಾಲಾ ಆಡಳಿತ ಮಂಡಳಿಗಳಲ್ಲಿ ಕಾರ್ಪೊರೇಟ್ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವ ಮೂಲಕ, ಪೋಷಕರು ಮತ್ತು ಸ್ಥಳೀಯ ಸಮುದಾಯ ಒಳಗೊಂಡಿರುವ ‘ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ'ಯ ಪ್ರಜಾಸತ್ತಾತ್ಮಕ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕ ಶಿಕ್ಷಣದ ಅನನ್ಯತೆ, ಆಡಳಿತಾತ್ಮಕ ಮತ್ತು ಪಠ್ಯಕ್ರಮದ ಸ್ವಾತಂತ್ರ್ಯವನ್ನು ಹರಾಜಿಗಿಟ್ಟಿರುವ ಸಿಎಸ್ಆರ್ ಮಾರ್ಗಸೂಚಿಗಳನ್ನು ಸರಕಾರವು ತಕ್ಷಣವೇ ಹಿಂಪಡೆಯಬೇಕು. ರಾಜ್ಯದ ಜನತೆಯ ಆಗ್ರಹದ ಮೇರೆಗೆ ರಚನೆಯಾದ ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ, ಈ ಕುರಿತು ಸರಕಾರ ವಿದ್ಯಾರ್ಥಿ ಸಂಘಟನೆಗಳು, ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಒಂದು ಚರ್ಚೆ ಏರ್ಪಡಿಸಬೇಕು. ಇಲ್ಲದಿದ್ದರೆ, ಮಾರಕ ನೀತಿಯ ವಿರುದ್ಧ ರಾಜ್ಯದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಪ್ರೇಮಿಗಳು ಒಗ್ಗೂಡಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.






