ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆಗೆ ಕಡಿವಾಣ ಹಾಕಲು ಆಗ್ರಹ

ಬೆಂಗಳೂರು : ಸಿನಿಮಾ, ಒಟಿಟಿ ಮತ್ತು ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಶ್ಲೀಲತೆಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿರ್ಮಲಾ ಎಚ್.ಎಲ್. ಆಗ್ರಹಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ರಾಜಸ್ಥಾನದ ಶ್ರೀ ಗಂಗಾನಗರ ಮತ್ತು ಪಶ್ಚಿಮ ಬಂಗಾಳದ ಬಾರೂಪುರದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸೂಕ್ತ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತ್ರಿಪಡಿಸಿ, ರಾಜಸ್ಥಾನ ಮತ್ತು ಬಂಗಾಳ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಗೀತಾ ಆರ್. ಮಾತನಾಡಿ, 13 ವರ್ಷದ ಬಾಲಕಿಯ ಮೇಲೆ 30ಕ್ಕೂ ಹೆಚ್ಚು ಪುರುಷರು ಅತ್ಯಾಚಾರ ಎಸಗುತ್ತಾರೆಂದರೆ ಇಂದೊಂದು ನಾಗರಿಕ ಸಮಾಜವೇ?. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಅಭದ್ರತೆಯ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ದೇಶಾದ್ಯಂತ ಹೆಚ್ಚುತ್ತಿರುವ ಇಂತಹ ಪೈಶಾಚಿಕ ದೌರ್ಜನ್ಯಗಳು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ ಎಂದು ಟೀಕಿಸಿದರು.
ಹೆಣ್ಣು ಮಕ್ಕಳನ್ನು ಭೋಗದ ವಸ್ತುವಾಗಿ ಕಾಣುವ ಮನಸ್ಥಿತಿಯನ್ನು ವ್ಯವಸ್ಥೆಯು ಪೋಷಿಸುತ್ತಿದೆ. ಇದಕ್ಕೆ ಎಳೆಯ ಕಂದಮ್ಮಗಳು ಬಲಿಯಾಗುತ್ತಿವೆ. ಇದು ಸಮಾಜದ ನೈತಿಕ ಬೆನ್ನೆಲುಬನ್ನು ಮುರಿಯುವ ಹುನ್ನಾರ. ಸರಕಾರಗಳು ಕೇವಲ ಸಾಂತ್ವನ ಹೇಳುವುದಕ್ಕೆ ಸೀಮಿತವಾಗದೆ, ಅಪರಾಧಿಗಳಿಗೆ ಭಯ ಹುಟ್ಟಿಸುವಂತಹ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತರಬೇಕು. ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಸುರಕ್ಷತೆಯನ್ನು ಖಾತ್ರಿ ಪಡಿಸಬೇಕು. ಹೆಣ್ಣು ಮಕ್ಕಳ ಮಾರಾಟ ಜಾಲವನ್ನು ಬೇರು ಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೀತಾ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಐಎಂಎಸ್‍ನ ಪದಾಧಿಕಾರಿಗಳಾದ ಭಾಗ್ಯ, ಹೇಮಾವತಿ, ಅನುರಾಧ, ಸುಜಾತ ಸೇರಿದಂತೆ ಹಲವರು ಭಾಗವಹಿಸಿದ್ದರು.






