ʼಮುಂದಿನ ಬಾರಿಗೆ ನಿಮ್ಮ-ನಮ್ಮ ಸರಕಾರ ಒಟ್ಟಿಗೆ ಕೆಲಸ ಮಾಡಬೇಕು’ : ಸರಕಾರಿ ನೌಕರರ ಸಮಾರಂಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು : ಮುಂದಿನ ಬಾರಿಗೆ ನಿಮ್ಮ ಮತ್ತು ನಮ್ಮ ಸರಕಾರ ಒಟ್ಟಿಗೆ ಕೆಲಸ ಮಾಡಬೇಕು ಎನ್ನುವ ಆಶಯ ಇದೆ. ಆದರೆ, ಇದಕ್ಕೆ ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ ತಾನೇ? ಎಂದು ಸರಕಾರಿ ನೌಕರರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಸ್ವಾಭಿಮಾನದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನಾನು ಸದಾ ಸರಕಾರಿ ನೌಕರರೊಂದಿಗೆ ಇರುತ್ತೇವೆ. ಮುಂದಿನ ಬಾರಿಯೂ ನಿಮ್ಮ-ನಮ್ಮ ಸರಕಾರ ಒಟ್ಟಿಗೆ ಕೆಲಸ ಮಾಡಬೇಕು. ಆದರೆ, ಇದರಲ್ಲಿ ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ ಎಂದು ಒಪ್ಪಂದ ಪತ್ರಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾ ನಂದನಾಥ ಹಾಗೂ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಸಹಿ ಹಾಕಿ, ಭದ್ರವಾಗಿ ಇಟ್ಟುಕೊಳ್ಳುತ್ತೇವೆ ಎಂದರು.
ಉಳಿ ಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆಯಾಗುವುದಿಲ್ಲ. ಉಳುಮೆ ಮಾಡದೇ ಯಾವ ಭೂಮಿಯೂ ಮಟ್ಟ ಆಗುವುದಿಲ್ಲ. ನಿಮ್ಮ ಬದುಕಿನ ಬಗ್ಗೆ ನಮಗೆ ಅರಿವಿದೆ. ಈ ನಿಟ್ಟಿನಲ್ಲಿ ನಾವು ನಿಮ್ಮ ಜೊತೆ ನಿಲ್ಲುತ್ತೇವೆ. ನಮ್ಮ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಸಚಿವ ಸಂಪುಟದೊಂದಿಗೆ ಚರ್ಚೆ ನಡೆಸಲಾಗುವುದು. ಓಪಿಎಸ್, ಎನ್‍ಪಿಎಸ್ ಬಗ್ಗೆ ನಮಗೆ ಗಮನವಿದೆ. ನೀವು ಆಡಳಿತ ಯಂತ್ರದ ರಥ. ನೀವು ಚೆನ್ನಾಗಿದ್ದರೆ ಇಡೀ ಆಡಳಿತ ಯಂತ್ರ ಚೆನ್ನಾಗಿ ನಡೆಯುತ್ತದೆ. ಕುಟುಂಬದ ರೀತಿಯಲ್ಲಿ ನಾವುಗಳು ಕೆಲಸ ಮಾಡಬೇಕು. ಮಾತು ಕೊಡುವುದೂ ಮುಖ್ಯವಲ್ಲ. ಮಾತು ಉಳಿಸಿಕೊಳ್ಳುವುದು ಮುಖ್ಯ ಎಂದು ಅವರು ತಿಳಿಸಿದರು.
ನಾನು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಹೊಸ ಇಲಾಖೆ ರಚನೆ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅನೇಕ ಹೋರಾಟಗಳು ನಡೆಯುತ್ತವೆ. ನೀವು ನಮ್ಮ ಬೇಡಿಕೆ ನಮ್ಮ ಮುಂದೆ ಇಟ್ಟಾಗ, ಇದನ್ನು ಕಾನೂನು ಚೌಕಟ್ಟಿನಲ್ಲಿ ಹೇಗೆ ಬಗೆಹರಿಸಬಹುದು, ಆರ್ಥಿಕ ಪರಿಸ್ಥಿತಿ ಏನು ಎಂದು ಪರಿಶೀಲನೆ ಮಾಡಲಾಗುವುದು. ಹೀಗೆ ಜನಸಾಮಾನ್ಯರ ನೋವು ಬಗೆಹರಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ ಎಂದ ಅವರು, ಜನರ ಸಮಸ್ಯೆ ಬಗೆಹರಿಸಲು ಮಾರ್ಗ ಹುಡುಕಬೇಕೇ ಹೊರತು, ಕೊಂಕು ಹುಡುಕಿ ಅವರನ್ನು ತಿರುಗಿಸಬಾರದು. ಕಾನೂನು ಚೌಕಟ್ಟಿನಲ್ಲಿ ಬಡ ಜನರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವುಗಳು ಆಧಾರಸ್ತಂಭ. ನೀವು ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಪ್ರಮುಖರಿದ್ದರು.






