ರಾಮನ ಹುಂಡಿ ಕದ್ದವರು ಮತದಾನದ ಹಕ್ಕನ್ನು ಕದಿಯುವ ಸಾಧ್ಯತೆಯಿದೆ : ವಿನಯ್ ಕುಮಾರ್ ಸೊರಕೆ

ಬೆಂಗಳೂರು : ಎಸ್‍ಐಆರ್ ಸಂದರ್ಭದಲ್ಲಿ ರಾಮನ ಹುಂಡಿ ಕದ್ದವರು ನಿಮ್ಮ ಮತದಾನದ ಹಕ್ಕನ್ನು ಕದಿಯುವ ಸಾಧ್ಯತೆಯಿದೆ. ಅದಕ್ಕಾಗಿ ಜಾಗೃತರಾಗಿ ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್.ನಾರಾಯಣ್ ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಜನರು ಕೊಟ್ಟ ದೇಣಿಗೆ ಹಣ ಈವರೆಗೂ ಲೆಕ್ಕ ಸಿಕ್ಕಿಲ್ಲ. ಸುಪ್ರೀಂಕೋರ್ಟ್ ಆದೇಶ ಬಳಿಕ, ದೇವಾಲಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ನೇಮಕವಾಗಿದ್ದ ಟ್ರಸ್ಟಿಗಳು, ಬೆಳಗ್ಗೆ 2.80 ಕೋಟಿ ರೂ.ಗಳಿಗೆ ನಿಗದಿಯಾಗಿದ್ದ ಜಾಗವನ್ನು ಮಧ್ಯಾಹ್ನ 12 ಗಂಟೆ ವೇಳೆಗೆ 18 ಕೋಟಿ ರೂ.ಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿದರು ಎಂದು ಅವರು ದೂರಿದರು.
ಚಂಪಕ್ ರಾಯ್ ಎಂಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಕ್ಷಾತ್ ಮಹಾವಿಷ್ಣುವಿನ ಪ್ರತಿರೂಪ ಎಂದು ಬಣ್ಣಿಸಿದ್ದನ್ನು ನೋಡಿದ್ದೇವೆ. ಚಂಪಕ್ ರಾಯ್, ಅನಿಲ್ ಮಿಶ್ರಾ, ಜಗನ್ನಾಥ ರಾವ್ ಆರೆಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಭಾಗ ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.
ಮಂದಿರ ನಿರ್ಮಾಣದಿಂದ ಉದ್ಘಾಟನೆ ಸಂದರ್ಭದಲ್ಲೇ ಶಂಕರಾಚಾರ್ಯರು ಮಂದಿರ ಉದ್ಘಾಟನೆ ಸಮಯ ಸೂಕ್ತವಾಗಿಲ್ಲ ಎಂದು ಹೇಳಿದ್ದರೂ ಚುನಾವಣೆಗೆ ಲಾಭ ಪಡೆಯಲು ಮಂದಿರ ಉದ್ಘಾಟನೆ ಮಾಡಿದರು. ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಂಡು ಬಂದಿದ್ದಾರೆ. ಕಾಣಿಕೆ ಹುಂಡಿ ಕಳ್ಳತನ ಮಾಡಿ ನಂಬಿಕೆ ಹಾಗೂ ಭಕ್ತಿಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಕಿಡಿಗಾರಿದರು.
ಭಕ್ತರ ಭಾವನೆಗೆ ಧಕ್ಕೆಯಾಗಿದ್ದರೂ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ನಲ್ಲಿ ಈ ವಿಚಾರದ ಬಗ್ಗೆ ಒಂದೇ ಒಂದು ಶಬ್ಧವನ್ನು ಕೇಳಿಲ್ಲ. ರಾಮಮಂದಿರ ಟ್ರಸ್ಟಿಗಳ ನೇಮಕದಲ್ಲಿ ನೇರವಾಗಿ ಪ್ರಧಾನಮಂತ್ರಿ ಭಾಗಿದಾರರಾಗಿದ್ದರು ಎಂದರು.






