ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕೆಪಿವೈಸಿಸಿ ವತಿಯಿಂದ ʼಬೃಹತ್ ಸೈಕಲ್ ಜಾಥಾʼ

ಬೆಂಗಳೂರು : ವಿದ್ಯಾರ್ಥಿಗಳ ಸಧೃಡ ಭವಿಷ್ಯಕ್ಕೆ ಬೇಕಾದ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುವಂತೆ ಹೋರಾಟಗಳ ಮೂಲಕ ಸರಕಾರಗಳಿಗೆ ಒತ್ತಾಯಿಸಬೇಕು. ಭವಿಷ್ಯದ ಜೊತೆ ಚೆಲ್ಲಾಟವಾಡುವ ಸರಕಾರವನ್ನು ಕಿತ್ತೊಗೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆಯ ಹೊಣೆಗಾರಿಕೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೆಪಿವೈಸಿಸಿ ವತಿಯಿಂದ ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನದ ಅಂಗವಾಗಿ ಬೃಹತ್ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕಚೇರಿಯಿಂದ ಪ್ರಾರಂಭವಾದ ಜಾಥಾವು ಕೆ.ಆರ್.ಸರ್ಕಲ್ ಮುಖಾಂತರ ಗಾಂಧಿ ಪ್ರತಿಮೆವರೆಗೆ ಸಾಗಿತು.
ಸರಿಯಾದ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಬದಲಾವಣೆ ಸಾಧ್ಯ. ಈ ಹೋರಾಟ ತಾರ್ಕಿಕ ಅಂತ್ಯ ತಲುಪುವವರೆಗೂ ನಿಲ್ಲಿಸಬೇಡಿ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 1.40 ಕೋಟಿ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿದೆ. ಅವರ ಆತ್ಮಸ್ಥೈರ್ಯ ಕುಂದಬಾರದು, ಅವರಲ್ಲಿ ಆತ್ಮವಿಶ್ವಾಸ ಪುನಃ ಮೂಡಬೇಕು ಎಂಬ ಸದುದ್ದೇಶದಿಂದ ರಾಹುಲ್ ಗಾಂಧಿ ಕೋಟಾದಲ್ಲಿ ವಿದ್ಯಾರ್ಥಿಗಳ ಧ್ವನಿ (ಛಾತ್ರೋನ್ ಕಿ ಗೂಂಜ್) ಅಭಿಯಾನಕ್ಕೆ ಚಾಲನೆ ನೀಡಿದರು ಎಂದು ಹರಿಪ್ರಸಾದ್ ಮಾಹಿತಿ ನೀಡಿದರು.
ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಭ್ರಷ್ಟ ವ್ಯವಸ್ಥೆಯ ಲೋಪಕ್ಕೆ ಯಾವುದೇ ವಿದ್ಯಾರ್ಥಿ ತಮ್ಮ ಜೀವವನ್ನು ಬಲಿಕೊಡಬಾರದು. ಬದಲಾವಣೆ ನಿರಂತರ ಹೋರಾಟದಿಂದ ಸಾಧ್ಯವೇ ಹೊರತು ಆತ್ಮಹತ್ಯೆಯಿಂದಲ್ಲ. ಪೋಷಕರು ಮಕ್ಕಳ ಮನಸ್ಥಿತಿಯನ್ನು ಅರ್ಥೈಸಿಕೊಂಡು ಅವರ ಬೆನ್ನಿಗೆ ನಿಲ್ಲಬೇಕಾದ ಅವಶ್ಯವಿದೆ. ಪರೀಕ್ಷಾ ಅಕ್ರಮದಿಂದ ಸಮರ್ಥರಲ್ಲದ, ಹಣ ಹೊಂದಿದ ವ್ಯಕ್ತಿಗಳು ಉನ್ನತ ಹುದ್ದೆಗಳನ್ನು ಪಡೆಯುತ್ತಿರುವುದು ದೇಶದ ದುರ್ದೈವ. ಇದನ್ನು ಒಗ್ಗಟ್ಟಿನ ಹೋರಾಟದಿಂದ ಮಾತ್ರ ತಡೆಯಲು ಸಾಧ್ಯ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆ ಕಾಣುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬಿಜೆಪಿಯವರು ಮಕ್ಕಳಿಗೆ ವಿದ್ಯೆ ನೀಡಲು ತಯಾರಿಲ್ಲ. ಅವರ ಮಕ್ಕಳು ಪರೀಕ್ಷಾ ಅಕ್ರಮದಿಂದ ಉತ್ತೀರ್ಣರಾಗಿ ವಿದೇಶಗಳಲ್ಲಿ ಉತ್ತಮ ಹುದ್ದೆ ಪಡೆಯಬೇಕು ಎಂದು ಬಯಸುತ್ತಾರೆ. ಇದುವರೆಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಯಾವುದೇ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಪರೀಕ್ಷಾ ಅಕ್ರಮದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು ಕನಿಷ್ಟ ಕ್ಷಮೆ ಕೇಳದ ಅವರಿಗೆ ನಾಚಿಕೆಯಾಗಬೇಕು ಎಂದು ಅವರು ಆಕ್ರೋಶ ಹೊರಹಾಕಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಎನ್‍ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮಂಜುನಾಥ್ ಆಗ್ರಹಿಸಿದರು. ಜಾಥಾದಲ್ಲಿ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ತಾರೀಖ್ ಭಗವಾನ್, ಕೆಪಿವೈಸಿಸಿ ಪದಾಧಿಕಾರಿಗಳಾದ ಚೈತ್ರಾ, ಶ್ರೀಧರ್ ಜಾಧವ್ ಸೇರಿದಂತೆ ಹಲವರು ಭಾಗವಹಿಸಿದ್ದರು.






