ಹಾರ್ಡ್‍ಡಿಸ್ಕ್ ಪರಿಶೀಲಿಸಿ ಸಿಸಿ ಕ್ಯಾಮೆರಾ ದೃಶ್ಯ ನೀಡಿ: ಮಾಹಿತಿ ಆಯೋಗದಿಂದ ಅಪರೂಪದ ಆದೇಶ

ಬೆಂಗಳೂರು : ಪೊಲೀಸ್ ಠಾಣೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಹಾರ್ಡ್ ಡಿಸ್ಕ್ ಪರಿಶೀಲನೆಗೆ ಒಳಪಡಿಸಿ, ಅಗತ್ಯ ಮಾಹಿತಿಯನ್ನು ಮೇಲ್ಮನವಿದಾರರಿಗೆ ಕೊಡುವಂತೆ ರಾಜ್ಯ ಮಾಹಿತಿ ಆಯೋಗ ಅಪರೂಪದ ಆದೇಶ ನೀಡಿದೆ.
ನಿಯಮ ಉಲ್ಲಂಘಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೂ ಆಯೋಗ ಶಿಫಾರಸು ಮಾಡಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಎಂ.ಆರ್.ನಾಗರಾಜು ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗದ 4ನೇ ಪೀಠದ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು, ಎರಡು ಪೊಲೀಸ್ ಠಾಣೆಗಳ ಸಿಸಿ ಕ್ಯಾಮೆರಾಗಳ ಹಾರ್ಡ್ ಡಿಸ್ಕನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿ ತನಿಖೆಗೆ ಒಳಪಡಿಸಲು ಆದೇಶಿಸಿದ್ದರು.
ಅದರಂತೆ ಮಳವಳ್ಳಿಯ ಹಾಲಿ ಡಿವೈಎಸ್ಪಿ ಯಶವಂತಕುಮಾರ್ ಅವರು ಬೆಂಗಳೂರಿನ ಮಡಿವಾಳದ ಎಫ್‍ಎಸ್‍ಎಲ್‍ಗೆ ಹಾರ್ಡ್ ಡಿಸ್ಕ್ ಸಲ್ಲಿಸಿ, ಅದರಲ್ಲಿ ಲಭ್ಯವಿದ್ದ ದೃಶ್ಯಾವಳಿಗಳನ್ನು ಸಿಡಿಗೆ ವರ್ಗಾವಣೆ ಮಾಡಿಸಿ, ವೈಜ್ಞಾನಿಕ ವರದಿಯೊಂದಿಗೆ ಅರ್ಜಿದಾರರಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೇ, ಈ ರೀತಿಯಲ್ಲಿ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಠಾಣೆಗೆ ಭೇಟಿ ನೀಡಿದ ಸಂದರ್ಭ ಮತ್ತು ಅವರನ್ನು ವಿಚಾರಣೆಗೊಳಪಡಿಸಿದ ದೃಶ್ಯಾವಳಿ ಮಾತ್ರ ನೀಡಬೇಕು. ಕ್ಯಾಮೆರಾದಲ್ಲಿ ದಾಖಲಾಗಿರುವ ಇತರೆ ಮಾಹಿತಿಯನ್ನು ಮುಸುಕು ಮಾಡಬೇಕು ಎಂದು ತಿಳಿಸಿದ್ದಾರೆ.
ಅಲ್ಲದೇ, ಅಂದಿನ ಡಿವೈಎಸ್ಪಿ ಹಾಗೂ ಪ್ರಸ್ತುತ ಬಳ್ಳಾರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ನವೀನ್ ಕುಮಾರ್ ಅವರು ಮಾಹಿತಿ ಹಕ್ಕು ಅರ್ಜಿಯನ್ನು ನಿಯಮಬದ್ಧವಾಗಿ ವರ್ಗಾವಣೆ ಮಾಡದೆ, ನಿರ್ಲಕ್ಷ್ಯ ವಹಿಸಿರುವುದು ಮಂಡ್ಯ ಎಎಸ್ಪಿ ಗಂಗಾಧರಸ್ವಾಮಿ ಅವರ ತನಿಖಾ ವರದಿಯಿಂದ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ನವೀನ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಆಯೋಗ ಸೂಚಿಸಿದ್ದು, ನೋಟಿಸ್ ಜಾರಿಯಾಗಿದೆ. ಅರ್ಜಿಗಳನ್ನು ನಿರ್ಲಕ್ಷ್ಯ ಮಾಡದಂತೆ ಇನ್‍ಸ್ಪೆಕ್ಟರ್‍ಗಳಿಗೂ ಸೂಕ್ತ ಎಚ್ಚರಿಕೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿಯ ಎಂ.ಆರ್.ನಾಗರಾಜು ಎಂಬವರು ಅಲ್ಲಿನ ಡಿವೈಎಸ್ಪಿ ಅವರಿಗೆ 2022ರ ಆಗಸ್ಟ್ 4ರಂದು ಅರ್ಜಿ ಸಲ್ಲಿಸಿ ದಿನಾಂಕ: 10-10-2021ರಿಂದ 31-03-2022ರವರೆಗಿನ ಮಳವಳ್ಳಿಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೋರಿದ್ದರು.
ಅರ್ಜಿಯನ್ನು ಪರಿಶೀಲಿಸಿದ್ದ ಠಾಣೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆ 8(1)(ಜೆ) ಅಡಿಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳು ಕೇವಲ ಆರು ತಿಂಗಳು ಮಾತ್ರ ಇರುತ್ತದೆ ಎಂಬುದುಪೊಲೀಸರ ವಾದವಾಗಿತ್ತು.
ಈ ಅರ್ಜಿಯನ್ನು ಸಂಬಂಧಪಟ್ಟ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಅದಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಗಮನಕ್ಕೂ ತರಬೇಕಾಗಿತ್ತು. ಆದರೆ, ಅಂದಿನ ಡಿವೈಎಸ್ಪಿ ಕೆಲವು ದೋಷಗಳನ್ನು ಮಾಡಿದ್ದರು. ಜತೆಗೆ, ಅಂದಿನ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಥಮ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೆ ಮುಂದಾಗಿರಲಿಲ್ಲ.






