ರಾಮಮಂದಿರ ದೇಣಿಗೆ ಕಳವು ಪ್ರಕರಣ: ರಾಜ್ಯದ ದೇವಸ್ಥಾನಗಳಲ್ಲೂ ಕಟ್ಟೆಚ್ಚರ, ಮಾರ್ಗಸೂಚಿ ಪ್ರಕಟಿಸಿದ ಸರಕಾರ

ಬೆಂಗಳೂರು : ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ದೇವಸ್ಥಾನದಲ್ಲಿ ಹುಂಡಿಯಲ್ಲಿನ ಚಿನ್ನಾಭರಣ, ನಗದು ಕಳ್ಳತನ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆ ರಾಜ್ಯದ ದೇವಾಲಯಗಳ ಹುಂಡಿ, ದೇಣಿಗೆ ಪೆಟ್ಟಿಗೆಗಳು, ನಗದು ಚಿನ್ನಾಭರಣ ಹಾಗೂ ಇತರ ವಸ್ತುಗಳ ಭದ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯ ವಿಧಾನ ಮಾರ್ಗಸೂಚಿ (ಎಸ್‍ಒಪಿ)ಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಹುಂಡಿ ಎಣಿಕೆ, ಲೆಕ್ಕ ಪತ್ರ ನಿರ್ವಹಣೆಯಲ್ಲಿ ಕಳ್ಳತನ ಹಾಗೂ ದುರುಪಯೋಗವಾಗಿದೆ ಎಂದು ಉಲ್ಲೇಖಿಸಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸತ್ತೋಲೆಯೊಂದನ್ನು ಹೊರಡಿಸಿದ್ದು, ದೇವಸ್ಥಾನಗಳಲ್ಲಿ ಹುಂಡಿಗಳನ್ನು ಎಲ್ಲರಿಗೂ ಕಾಣುವ ಜಾಗದಲ್ಲಿ ಇರಿಸಬೇಕು. ನಾಲ್ಕು ದಿಕ್ಕುಗಳಲ್ಲಿ ಸಿಸಿಟಿವಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಿ, ಅವುಗಳ ನೇರ ನಿಗಾವಣೆಗಾಗಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್ ಕಚೇರಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಿಗೆ ನೇರ ಸಂಪರ್ಕ ಕಲ್ಪಿಸಬೇಕು. ಜೊತೆಗೆ ಧಾರ್ಮಿಕ ದತ್ತಿಯ ಕೇಂದ್ರ ಕಚೇರಿಯ ಸರ್ವರ್‍ಗೂ ಸಂಪರ್ಕಗೊಂಡಿರಬೇಕು ಎಂದು ಸೂಚಿಸಲಾಗಿದೆ.
ಸಿಸಿಟಿವಿ, ಡಿವಿಆರ್‍ಗಳನ್ನು ಕಳ್ಳತನ ಮಾಡುವುದು, ನಿಷ್ಕ್ರಿಯಗೊಳಿಸುವುದು ಅಥವಾ ಧ್ವಂಸ ಮಾಡುವ ಪ್ರಕರಣಗಳು ಕಂಡು ಬರುತ್ತಿವೆ. ಇನ್ನೂ ಕೆಲವು ಕಡೆ ಕರ್ಪೂರ ಹಚ್ಚಿ ಅದರಿಂದ ಬರುವ ಕಾರ್ಬನ್ ಅನ್ನು ಸಿಸಿಟಿವಿಗಳಿಗೆ ಹಿಡಿದು, ಕಪ್ಪು ಹೊಗೆಯಿಂದ ಕ್ಯಾಮೆರಾದ ಗಾಜು ಮಬ್ಬಾಗುವಂತೆ ಮಾಡಲಾಗುತ್ತದೆ. ಇದಕ್ಕಾಗಿ ವೆಬ್ ಕ್ಯಾಮೆರಾಗಳನ್ನೆ ಅಳವಡಿಸಬೇಕೆಂದು ತಿಳಿಸಲಾಗಿದೆ.
ಜೇಬು ಕಳ್ಳತನ ಹಾಗೂ ಇತರ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ಯೂಆರ್ ಕೋಡ್ ಅನ್ನು ಹೆಚ್ಚಾಗಿ ಬಳಸಬೇಕು. ಭಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಅಥವಾ ನೆಟ್ ಬ್ಯಾಂಕ್‍ನಿಂದ ದೇಣಿಗೆ ಪಾವತಿಸಲು ಪ್ರೋತ್ಸಾಹಿಸಬೇಕು. ಕ್ಯೂಆರ್ ಕೋಡ್ ಹಾಳಾಗದಂತೆ ಮತ್ತು ಅದರ ಮೇಲೆ ಬೇರೆ ಕ್ಯೂಆರ್ ಕೋಡ್ ಅಂಟಿಸದಂತೆಯೂ ಎಚ್ಚರಿಕೆ ವಹಿಸಬೇಕು. ಹುಂಡಿಗಳ ಬಳಿಯೇ ಕ್ಯೂಆರ್ ಕೋಡ್ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಹುಂಡಿ ಹಣ ಎಣಿಕೆಗೆ ಒಂದು ವಾರದ ಮೊದಲೇ ದಿನಾಂಕ ನಿಗದಿ ಮಾಡಿ ಪ್ರಕಟಿಸಬೇಕು. ಹೆಚ್ಚು ಹಣ ಸಂಗ್ರಹವಾಗುವ ದೇವಸ್ಥಾನಗಳಲ್ಲಿ ಪ್ರತಿ ವಾರ, ಸಾಧಾರಣ ಸಂಗ್ರಹಣೆಯ ದೇವಸ್ಥಾನಗಳಲ್ಲಿ ಎರಡು ವಾರಕ್ಕೊಮೆ ತಹಸೀಲ್ದಾರ್ ಮೇಲ್ವಿಚಾರಣೆಯಲ್ಲಿ ಹುಂಡಿ ಎಣಿಕೆಯಾಗಬೇಕು. ಅದರ ಹಣ ಉಪ ಖಜಾನೆಗೆ ಜಮಾವಣೆಯಾಗುವವರೆಗೂ ಕಟ್ಟುನಿಟ್ಟಿನ ನಿಗಾವಣೆ ಇರಬೇಕು. ಪ್ರತಿಯೊಂದು ಪ್ರಕ್ರಿಯೆಯೂ ವಿಡಿಯೋ ಚಿತ್ರೀಕರಣವಾಗಬೇಕು ಎಂದು ತಿಳಿಸಲಾಗಿದೆ.
ಹುಂಡಿ ಎಣಿಕೆಗೆ ಖಾಸಗಿ ವ್ಯಕ್ತಿಗಳ ಬದಲಾಗಿ ಬ್ಯಾಂಕ್ ಸಿಬ್ಬಂದಿ, ಸರಕಾರಿ ನೌಕರರು, ಗೃಹ ರಕ್ಷಕ ಸಿಬ್ಬಂದಿಗಳನ್ನು ಮಾತ್ರ ಬಳಸಬೇಕು. ಎಣಿಕೆಗೆ ತೆರಳುವ ಮುನ್ನ ಅವರ ಬಳಿ ಇರುವ ನಗದನ್ನು ಘೋಷಿಸಬೇಕು. ಹೊರ ಹೋಗುವಾಗ ತೀವ್ರ ತಪಾಸಣೆಯಾಗಬೇಕು. ಮುಖ ಗುರುತಿಸುವಿಕೆಯ ಹಾಜರಾತಿ ಕಡ್ಡಾಯವಾಗಿದೆ. ಅದೇ ರೀತಿ, ಸ್ಥಳೀಯ ಪೊಲೀಸ್ ಇನ್ಸ್‍ಪೆಕ್ಟರ್ ಅಥವಾ ಠಾಣಾಧಿಕಾರಿ ನಿಯಮಿತವಾಗಿ ದೇವಾಲಯಗಳಿಗೆ ಭೇಟಿ ನೀಡಿ ಲೈವ್ ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಬೇಕು.
ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿ, ಎಸ್ಪಿ, ಸಿಇಒಗಳು ಮೂರು ತಿಂಗಳಿಗೊಮೆ ಜಂಟಿಯಾಗಿ ಭೇಟಿ ನೀಡಬೇಕು. ಇತರ ವರ್ಗದ ದೇವಸ್ಥಾನಗಳಿಗೆ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖಾಧಿಕಾರಿಗಳು 15 ದಿನಕ್ಕೊಮೆ ಭೇಟಿ ನೀಡಬೇಕು. ಸ್ಥಳೀಯ ಲೋಪ ದೋಷಗಳನ್ನು ಮತ್ತು ಅಭಿವೃದ್ಧಿ ಯೋಜನೆ ಬಗ್ಗೆ ಮಾಸಿಕ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಬೇಕು ಹಾಗೂ ಲೆಕ್ಕ ಪರಿಶೋಧನೆಯಲ್ಲಿ ನಿಖರತೆ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.






