ಆಗಸ್ಟ್‌ನಿಂದ ‘ಕಸಮುಕ್ತ ಬೆಂಗಳೂರು’ ಅಭಿಯಾನ ಆರಂಭ : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಉದ್ಯಾನನಗರಿ ಬೆಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರ ಪಾಲಿಕೆ, ಕೆ-ರೈಡ್, ರೈಲ್ವೆ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಆಗಸ್ಟ್ ತಿಂಗಳಿನಿಂದ ‘ಕಸದಿಂದ ಸ್ವಾತಂತ್ರ್ಯ’ ಅಭಿಯಾನ ನಡೆಸಲು ಕ್ರಮವಹಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಜಿಬಿಎ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಕಸ, ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು, ಮಣ್ಣಿನ ಗುಡ್ಡೆಗಳು, ಕಳೆ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಉದ್ದೇಶದಿಂದ ಆಗಸ್ಟ್ ತಿಂಗಳ ಪೂರ್ತಿ ‘ಕಸದಿಂದ ಸ್ವಾತಂತ್ರ್ಯ’ ಅಭಿಯಾನ ಹಮ್ಮಿಕೊಳ್ಳಲು ಯೋಜನೆ ರೂಪಿಸಬೇಕು ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವತಿಯಿಂದ 1,616 ಸ್ಥಳಗಳಲ್ಲಿ ಸುಮಾರು 22,732 ಟನ್ ತ್ಯಾಜ್ಯ ಗುರುತಿಸಲಾಗಿದ್ದು, ಅದನ್ನು ತೆರವುಗೊಳಿಸಲು ಸಮಗ್ರ ಯೋಜನೆ ರೂಪಿಸಬೇಕು ಎಂದು ಕೃಷ್ಣಬೈರೇಗೌಡ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಖಾಲಿ ಜಾಗಗಳಲ್ಲಿ ಬೆಳೆದಿರುವ ಕಳೆ, ಗಿಡ-ಗಂಟಿಗಳು ಹಾಗೂ ತ್ಯಾಜ್ಯವನ್ನು ಸ್ವತ್ತಿನ ಮಾಲೀಕರೇ ತೆರವುಗೊಳಿಸಿಕೊಳ್ಳಲು ಆಗಸ್ಟ್ 15ರವರೆಗೆ ಕಾಲಾವಕಾಶ ನೀಡಲಾಗುವುದು. ಬಳಿಕವೂ ತೆರವುಗೊಳಿಸದಿದ್ದರೆ, ಪಾಲಿಕೆಯಿಂದ ತೆರವುಗೊಳಿಸಿ ಅದರ ವೆಚ್ಚವನ್ನು ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಸ್ವತ್ತಿನ ಮಾಲಕರು ಜವಾಬ್ದಾರಿ ವಹಿಸಿಕೊಂಡು ಆಗಸ್ಟ್ 15ರೊಳಗೆ ತಮ್ಮ ಖಾಲಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಚಿವರು ಮನವಿ ಮಾಡಿದರು.






