ಎ.ಪಿ.ಮಾಲತಿ, ಎಂ.ಎಸ್.ವೇದಾಗೆ ʼಅನುಪಮಾ ನಿರಂಜನ ಪ್ರಶಸ್ತಿʼ

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಅನುಪಮಾ ನಿರಂಜನ ದತ್ತಿ ಪ್ರಶಸ್ತಿಯನ್ನು ಘೋಷಿಸಿದ್ದು 2025ನೇ ಸಾಲಿಗೆ ಎ.ಪಿ.ಮಾಲತಿ ಹಾಗೂ 2026ನೇ ಸಾಲಿಗೆ - ಎಂ.ಎಸ್.ವೇದಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಡಾ.ಅನುಪಮಾ ನಿರಂಜನ ಅವರು ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಲೇಖಕಿಯಾಗಿ ಎರಡೂ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ತಮ್ಮ ಬರಹದಲ್ಲಿ ಸದಾ ಜೀವಂತವಿರಿಸಿದ್ದ ಅವರು ಎಲ್ಲ ಕಾಲಕ್ಕೂ ಸಲ್ಲುವ ಲೇಖಕಿ. ಅವರ ಆಸೆಯಂತೆ ಅನುಪಮಾ ನಿರಂಜನರ ಮಕ್ಕಳು ಕಲೇಸಂನಲ್ಲಿ ಇಟ್ಟ ದತ್ತಿಯಿಂದ ಅನುಪಮಾ ನಿರಂಜನ ಅವರ ಹೆಸರಿನಲ್ಲಿ ಪ್ರತಿವರ್ಷ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 10 ರೂ. ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ತೀರ್ಪುಗಾರರಾಗಿ ಹೇಮಲತಾ ಮಹಿಷಿ, ಎಚ್.ಆರ್.ಸುಜಾತ ಹಾಗೂ ಸುಮಾ ಸತೀಶ್ ಅವರಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.




