ಖಾಸಗಿ ಶಾಲೆಗಳು ಸರಕಾರಿ ಶಾಲೆಗಳ ದತ್ತು ಪಡೆದು ಶಿಕ್ಷಕರನ್ನು ಒದಗಿಸಬೇಕೆಂಬ ಸಿಎಂ ಪ್ರಸ್ತಾವ ಖಂಡನೀಯ

ಸಾಂದರ್ಭಿಕ ಚಿತ್ರ | Photo Credit : magnific
ಬೆಂಗಳೂರು : ಐವತ್ತು ಸಾವಿರ ರೂ.ಗಳಿಗಿಂತ ಹೆಚ್ಚು ವಾರ್ಷಿಕ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು ಗ್ರಾಮೀಣ ಸರಕಾರಿ ಶಾಲೆಗಳನ್ನು ದತ್ತು ಪಡೆದು ಶಿಕ್ಷಕರನ್ನು ಒದಗಿಸಬೇಕು ಎಂಬ ಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರಸ್ತಾವನೆ ಅತ್ಯಂತ ಖಂಡನೀಯವಾಗಿದೆ ಎಂದು ‘ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಮಿತಿ’ ಆಕ್ಷೇಪಿಸಿದೆ.
ಶುಕ್ರವಾರ ಈ ಸಂಬಂಧ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ, ಎಐಟಿಯುಸಿ ಅಧ್ಯಕ್ಷ ಪ್ರೊ.ಬಾಬು ಮ್ಯಾಥ್ಯೂ, ರೈತ ಮುಖಂಡ ವೀರಸಂಗಯ್ಯ, ದಸಂಸ ಮಾವಳ್ಳಿ ಶಂಕರ್, ವಿದ್ಯಾರ್ಥಿ ಪಾಲಕರ ಸಮನ್ವಯ ವೇದಿಕೆಯ ಯೋಗಾನಂದ ಬಿ.ಎನ್., ವಿದ್ಯಾರ್ಥಿ ಮುಖಂಡರಾದ ಅಜಯ್ ಕಾಮತ್, ವೀಣಾ ಎಲ್.ವೈ., ಲೇಖ ಅಡವಿ ಸೇರಿದಂತೆ ಹಲವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿಯ ಪ್ರಸ್ತಾವನೆ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಕ್ರಮವಲ್ಲ, ಬದಲಾಗಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡ, ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ದುರ್ಬಲ ವರ್ಗಗಳ ಮಕ್ಕಳ ಭವಿಷ್ಯವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ದಯೆ ಮತ್ತು ಮರ್ಜಿಗೆ ಒಪ್ಪಿಸುವ ಹೊಸ ಬಗೆಯ ಖಾಸಗೀಕರಣದ ಮಾದರಿಯಾಗಿದೆ. ಶಿಕ್ಷಣವು ದಾನ-ಧರ್ಮ ಅಥವಾ ಕಾರ್ಪೊ ರೇಟ್ ಸಾಮಾಜಿಕ ಹೊಣೆಗಾರಿಕೆಯ ಯೋಜನೆಯಲ್ಲ; ಸಂವಿಧಾನದ ಅನುಚ್ಛೇದ 21ಎ ಅಡಿಯಲ್ಲಿ ಮಾನ್ಯತೆ ಪಡೆದ ಮೂಲಭೂತ ಹಕ್ಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ, ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಖಾಸಗಿ ಸಂಸ್ಥೆಗಳು ಒದಗಿಸಲಿ ಎನ್ನುವುದು ಸರಕಾರ ತನ್ನ ಸಂವಿಧಾನಬದ್ಧ ಮತ್ತು ಕಾನೂನುಬದ್ಧ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಬೇಜವಾಬ್ದಾರಿ ಪ್ರಸ್ತಾವನೆಯಾಗಿದೆ. ಶಿಕ್ಷಕರ ನೇಮಕ ಮತ್ತು ಶೈಕ್ಷಣಿಕ ಆಡಳಿತವನ್ನು ಖಾಸಗಿ ಸಂಸ್ಥೆಗಳ ಕೈಗೆ ಒಪ್ಪಿಸಿದರೆ ಅವರ ಉತ್ತರದಾಯಿತ್ವ, ಸೇವಾ ಷರತ್ತು, ಪಠ್ಯಕ್ರಮದಲ್ಲಿ ಹಸ್ತಕ್ಷೇಪ ಮತ್ತು ಮಕ್ಕಳ ಹಕ್ಕು ಉಲ್ಲಂಘನೆಯ ಹೊಣೆಗಾರಿಕೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ. ಇದು ಬಡ ಮಕ್ಕಳಿಗೆ ದಾನಾಧಾರಿತ, ಅಸ್ಥಿರ ಮತ್ತು ಎರಡನೇ ದರ್ಜೆಯ ಶಿಕ್ಷಣವನ್ನು ಶಾಶ್ವತಗೊಳಿಸುವ ಅಪಾಯ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.
ಸರಕಾರ ಈ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಸರಕಾರಿ ಶಾಲೆಗಳ ಖಾಲಿ ಶಿಕ್ಷಕರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಶಿಕ್ಷಣ ಹಕ್ಕು ಕಾಯಿದೆಯ ಮೂಲಸೌಕರ್ಯ ಮತ್ತು ವಿದ್ಯಾರ್ಥಿ ಶಿಕ್ಷಕರ ಅನುಪಾತದ ಮಾನದಂಡಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು. ಶಿಕ್ಷಣಕ್ಕೆ ಅಗತ್ಯ ಬಜೆಟ್ ಒದಗಿಸಬೇಕು. ಖಾಸಗಿ ಶಾಲೆಗಳ ಅನಿಯಂತ್ರಿತ ಶುಲ್ಕ ಮತ್ತು ಪೋಷಕರ ಶೋಷಣೆಯನ್ನು ತಡೆಯಲು ಕಠಿಣ ಹಾಗೂ ಪಾರದರ್ಶಕ ಶುಲ್ಕ ನಿಯಂತ್ರಣ ಕಾಯಿದೆ ಜಾರಿಗೊಳಿಸಬೇಕು. ಸಾರ್ವಜನಿಕ ಶಿಕ್ಷಣವನ್ನು ಖಾಸಗಿಯವರ ದಯೆಗೆ ಬಿಡದೆ ಸರಕಾರದ ಸಂವಿಧಾನಬದ್ಧ ಹೊಣೆಗಾರಿಕೆಯಾಗಿಯೇ ನಿರ್ವಹಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.






