ಜಾಣಗೆರೆ ವೆಂಕಟರಾಮಯ್ಯ ಕಸಾಪ ಚುನಾವಣೆಗೆ ಅಭ್ಯರ್ಥಿ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕನ್ನಡ ಪರ ಹೋರಾಟಗಾರ, ಹಿರಿಯ ಪತ್ರಕರ್ತ ಹಾಗೂ ಲೇಖಕ ಜಾಣಗೆರೆ ವೆಂಕಟರಾಮಯ್ಯ ಅವರು ಸ್ಪರ್ಧಿಸಲಿದ್ದಾರೆ ಎಂದು ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಪ್ರಕಟಿಸಿದೆ.
ಇತ್ತೀಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಎಲ್. ಹನುಮಂತಯ್ಯ, ಕೆ.ಟಿ.ಶ್ರೀಕಂಠೇಗೌಡ, ಮಾವಳ್ಳಿ ಶಂಕರ್, ಡಾ.ವಸುಂಧರಾ ಭೂಪತಿ, ಆರ್.ಜಿ.ಹಳ್ಳಿ ನಾಗರಾಜ್, ಮೀರಾ ಶಿವಲಿಂಗಯ್ಯ, ಸಿ.ಕೆ.ರಾಮೇಗೌಡ, ಡಿ.ಈರಯ್ಯ ಸೇರಿದಂತೆ ಇನ್ನಿತರರು ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ.
ಮುಂಬರುವ ನವೆಂಬರ್ ಬಳಿಕ ಕಸಾಪ ಚುನಾವಣೆ ನಡೆಯಲಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಇತ್ತೀಚಿನ ವರ್ಷಗಳಲ್ಲಿ ಅಧಃಪತನದತ್ತ ಸಾಗಲು, ಸಾಮಾನ್ಯ ಕನ್ನಡಿಗರಿಂದ ದೂರವಾಗಲು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿ ಬಂದಿದ್ದ ಅಧಿಕಾರಶಾಹಿಗಳೇ ಕಾರಣ. ಪರಿಷತ್ತಿನ ಗೌರವ-ಘನತೆಯನ್ನು ಮರುಸ್ಥಾಪಿಸುವ ಆಶಯದೊಂದಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಸಮಿತಿ ತಿಳಿಸಿದೆ.
ಹಿರಿಯರಾದ ಜಾಣಗೆರೆ ಅವರು ಯಾವುದೇ ಸ್ಥಾನ, ಪ್ರಶಸ್ತಿಗಳಿಗೆ ಲಾಬಿ ಮಾಡಿದವರಲ್ಲ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ, ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮಂಥನ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದು, ರಾಜ್ಯೋತ್ಸವ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಸಮಿತಿ ತಿಳಿಸಿದೆ.






