ಕಸಾಪದ ʼಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿ'ಗೆ ಡಾ.ಸಿ.ಪಿ.ಕೃಷ್ಣಕುಮಾರ್ ಆಯ್ಕೆ

ಬೆಂಗಳೂರು, ಜು. 27: ಕನ್ನಡ ಸಾಹಿತ್ಯ ಪರಿಷತ್‍ನ `ಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿ'ಗೆ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಶಾಂತ ವಸಂತಕುಮಾರ್ ಅವರು ತಮ್ಮ ಪತಿ ಹೆಸರಿನಲ್ಲಿ 2.50ಲಕ್ಷ ರೂ.ಠೇವಣಿ ಇರಿಸಿ, ‘ಮಳಲಿ ವಸಂತಕುಮಾರ್ ಸಾಹಿತ್ಯ ಪ್ರಶಸ್ತಿ ದತ್ತಿ’ಯನ್ನು ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯನ್ನು ಸಾಹಿತಿಗಳಿಗೆ, ಕನ್ನಡಪರ ಹೋರಾಟಗಾರರಿಗೆ ಹಾಗೂ ಯುವ ಸಾಹಿತಿಗಳಿಗೆ ನೀಡಬೇಕೆಂಬುದು ದತ್ತಿ ದಾನಿಗಳ ಆಶಯವಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿ ಹಾಗೂ ಆಯ್ಕೆ ಸಮಿತಿ ಸದಸ್ಯರಾದ ಡಾ.ಎಚ್.ಎಲ್. ಪುಷ್ಪ, ದತ್ತಿ ದಾನಿಗಳಾದ ವೆಂಕಟೇಶ್ ಜಿ. ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯು 2026ನೇ ಸಾಲಿನ ಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿ ಪ್ರಶಸ್ತಿಗೆ ಅಧ್ಯಾಪಕ, ಸಂಶೋಧಕ ಹಾಗೂ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.




