‘ಉಮರ್ ಖಾಲಿದ್, ಶರ್ಜೀಲ್ ಇಮಾಮ್‌ರ ಫಲಕ ಪ್ರದರ್ಶನ’ | ವಿದ್ಯಾರ್ಥಿನಿ ಮೇಲಿನ ಎಫ್‌ಐಆರ್ ಹಿಂಪಡೆಯಲು ಗೃಹ ಸಚಿವರಿಗೆ ಎಪಿಸಿಆರ್ ಮನವಿ

ಬೆಂಗಳೂರು : ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿ ಫ್ರೀಡಂ ಪಾರ್ಕ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳು ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ವಿಚಾರಣಾಧೀನ ಕೈದಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪರವಾಗಿ ಭಿತ್ತಿಪತ್ರ ಪ್ರದರ್ಶಿಸಿದ ವಿದ್ಯಾರ್ಥಿನಿ ವಿರುದ್ಧ ದಾಖಲಾದ ಸ್ವಯಂ ಪ್ರೇರಿತ ಪ್ರಕರಣವನ್ನು ಹಿಂಪಡೆಯಬೇಕು ಎಂದು ಎಪಿಸಿಆರ್ ರಾಜ್ಯ ಸಂಯೋಜಕ ಮುಹಮ್ಮದ್ ಪೀರ್ ಮನವಿ ಮಾಡಿದ್ದಾರೆ.
ಮಂಗಳವಾರ ಈ ಸಂಬಂಧ ವಿಕಾಸಸೌಧದಲ್ಲಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದ ಅವರು, ವಿದ್ಯಾರ್ಥಿನಿಯ ವಿರುದ್ಧ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ನಿರ್ದೇಶನ ನೀಡುವಂತೆ ಕೋರಿದರು.
ಮನವಿ ಪತ್ರದಲ್ಲಿ ಏನಿದೆ?: ಜು.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸ್ವಾಗತಿಸಿ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಓರ್ವ ವಿದ್ಯಾರ್ಥಿನಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಬೆಂಬಲ ಸೂಚಿಸುವುದರ ಜೊತೆಗೆ ಬೆಂಗಳೂರು ಪೊಲೀಸರ ಬಗ್ಗೆ ಅವಹೇಳನಕಾರಿ ಬರಹದ ಭಿತ್ತಿಪತ್ರ ಪ್ರದರ್ಶಿಸಿದ್ದಕ್ಕಾಗಿ ಬೆಂಗಳೂರು ಪೊಲೀಸರು ಸ್ವಯಂಪ್ರೇರಿತವಾಗಿ ವಿದ್ಯಾರ್ಥಿನಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಂಸತ್ ಚಲೋದ ಪ್ರತಿಭಟನಾನಿರತ ವಿದ್ಯಾರ್ಥಿ-ಯುವಜನರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ದಿಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾರೆ, ಆಕ್ರೋಶ ಭರಿತ ವಿದ್ಯಾರ್ಥಿಗಳು/ಯುವಜನರು ಭಿತ್ತಿಪತ್ರದಲ್ಲಿ ಬೆಂಗಳೂರು ಪೊಲೀಸರ ಬಗೆಗೂ ಅವಹೇಳನಕಾರಿ ಬರಹ ಬರೆದುಕೊಂಡು ಪ್ರದರ್ಶನ ಮಾಡಿರುವುದು ಸಮಂಜಸವಲ್ಲ.
ಆದರೆ ಈ ಕೃತ್ಯವು ಉದ್ದೇಶಪೂರ್ವಕವಲ್ಲ ಪ್ರತಿಭಟನಾ ಯುವಜನರು ಬೆಂಗಳೂರು ಪೊಲೀಸರ ಬಗೆಗೆ ಯಾವುದೇ ದ್ವೇಷವಿನ್ನು ಹೊಂದಿಲ್ಲ, ಇದರೊಂದಿಗೆ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಗಳೂರು ಪೊಲೀಸರು ಇದುವರೆಗೂ ಸಹಕಾರ ನೀಡಿರುವುದನ್ನ ಅನೇಕ ವಿದ್ಯಾರ್ಥಿ/ಯುವಜನ ಮುಖಂಡರು ಗೌರವಿಸಿದ್ದಾರೆ.
ಕ್ಷುಲ್ಲಕ ಬರಹ ಬರೆದುಕೊಂಡು ಬಂದು ಪ್ರದರ್ಶಿಸಿದ ವಿದ್ಯಾರ್ಥಿನಿಯ ಬರಹವನ್ನು ಪರಿಗಣಿಸದೆ ವಿದ್ಯಾರ್ಥಿನಿಯ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಮುಹಮ್ಮದ್ ಪೀರ್ ಪತ್ರದಲ್ಲಿ ವಿವರಿಸಿದ್ದಾರೆ.






