ಚಿತ್ರ ಸಾಹಿತಿ ಕವಿರಾಜ್ ನೇತೃತ್ವದಲ್ಲಿ ‘ನೀಟ್ ಬೇಡ, ನಮ್ಮ ಸಿಇಟಿ ಬೇಕು’ ಸಹಿ ಅಭಿಯಾನ

ಬೆಂಗಳೂರು: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಕರ್ನಾಟಕದಲ್ಲಿ ನೀಟ್ ವಿರುದ್ಧದ ಆಕ್ರೋಶ ಮತ್ತಷ್ಟು ಜೋರಾಗಿದ್ದು, ‘ನಮಗೆ ನೀಟ್ ಬೇಡ, ನಮ್ಮ ಕೆ-ಸಿಇಟಿ ಬೇಕು’ ಎಂಬ ಹೊಸ ಸಹಿ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.
‘ನಮ್ಮ ನಾಡು ನಮ್ಮ ಆಳ್ವಿಕೆ’ ಸಂಘಟನೆಯಿಂದ ಚಿತ್ರ ಸಾಹಿತಿ ಕವಿರಾಜ್ ನೇತೃತ್ವದಲ್ಲಿ ನಾಡಿನ ಸಾಹಿತಿಗಳು, ಹೋರಾಟಗಾರರು, ವಿದ್ಯಾರ್ಥಿಗಳು ಹಾಗೂ ಪೋಷಕರು ಒಂದಾಗಿ ಈ ಸೈನ್ ಪಿಟಿಷನ್ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಬಗ್ಗೆ ಚಿತ್ರ ಸಾಹಿತಿ ಕವಿರಾಜ್ ಪ್ರತಿಕ್ರಿಯಿಸಿ, ನೀಟ್ ವ್ಯವಸ್ಥೆಯಿಂದ ಕನ್ನಡ ನಾಡಿನ ಮಕ್ಕಳು ಎಂಬಿಬಿಎಸ್ ಓದುವುದರಿಂದ ವಂಚಿತರಾಗುತ್ತಿದ್ದಾರೆ. ಇದೊಂದು ಕೋಚಿಂಗ್ ಮಾಫಿಯಾ ಕೂಡ ಹೌದು. ಬಡ ಮಕ್ಕಳು ದುಬಾರಿ ಕೋಚಿಂಗ್ ಜಾಲದಿಂದ ನೀಟ್ ಬರೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀಟ್ ಬೇಡ ಸಿಇಟಿ ಬೇಕು ಎಂಬ ಅಭಿಯಾನ ಪ್ರಾರಂಭಿಸಿದ್ದೇವೆ.ಮೂರು ದಿನಗಳಿಂದ ಅಭಿಯಾನ ನಡೆಯುತ್ತಿದ್ದು, ಶುರುವಾದ ಮೊದಲನೇ ದಿನವೇ 2,000ಕ್ಕೂ ಅಧಿಕ ಜನರು ಸಹಿ ಸಂಗ್ರಹಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ವೈದ್ಯಕೀಯ ಸೀಟುಗಳ ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯನ್ನೇ ಆಧಾರವಾಗಿಟ್ಟುಕೊಳ್ಳಬೇಕು ಎಂದು ಕವಿರಾಜ್ ಆಗ್ರಹಿಸಿದ್ದಾರೆ.
ದೇಶಾದ್ಯಂತ ಕಡ್ಡಾಯಗೊಳಿಸಿರುವ ನೀಟ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು. ವೈದ್ಯಕೀಯ ಪ್ರವೇಶಾತಿ ಹಕ್ಕನ್ನು ರಾಜ್ಯಗಳಿಗೆ ಮರಳಿಸಿ, ಕರ್ನಾಟಕದಲ್ಲಿ ಕೆ-ಸಿಇಟಿ ಮರುಸ್ಥಾಪಿಸಬೇಕು. ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ ಪಟ್ಟಿಗೆ ಮರಳಿ ತರಬೇಕು ಮತ್ತು ಕೇಂದ್ರದ ಪಾತ್ರವನ್ನು ಕೇವಲ ಗುಣಮಟ್ಟದ ನಿಯಮ ರೂಪಿಸುವುದಕ್ಕೆ ಸೀಮಿತಗೊಳಿಸಬೇಕು ಎಂಬುದು ಅಭಿಯಾನದ ಪ್ರಮುಖ ಬೇಡಿಕೆಗಳಾಗಿವೆ.
-ಕವಿರಾಜ್, ಚಿತ್ರ ಸಾಹಿತಿ






