ಪೆರಿಯಾರ್‌ವಾದಿಗಳಿಗೆ ಆತ್ಮಗೌರವ, ಸಮಾನತೆ ಕಣ್ಣುಗಳಿದ್ದಂತೆ : ಡಾ.ಸೋಮ ಇಳಂಗೋವನ್

ಬೆಂಗಳೂರು : ‘ಆತ್ಮಗೌರವ ಮತ್ತು ಸಮಾನತೆ ಇವೆರಡೂ ಪೆರಿಯಾರ್‌ವಾದಿಗಳಿಗೆ ಕಣ್ಣುಗಳಿದ್ದಂತೆ. ನಾವು ಅವುಗಳನ್ನು ಸುರಕ್ಷಿತವಾಗಿಡಬೇಕು ಮತ್ತು ಜಗತ್ತಿಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಬೇಕು’ ಎಂದು ಪೆರಿಯಾರ್ ಇಂಟರ್‌ನ್ಯಾಷನಲ್ ಚಿಕಾಗೊದ ಅಧ್ಯಕ್ಷ ಡಾ.ಸೋಮ ಇಳಂಗೋವನ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಲೋಹಿಯಾ ಸಮತಾ ವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ‘ಸಮಾನತೆ ಮತ್ತು ಸ್ವಾಭಿಮಾನದ ಕ್ರಾಂತಿ ಸ್ಫೂರ್ತಿ ಸೆಲೆ ಪೆರಿಯಾರ್’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೇವಸ್ಥಾನಗಳಲ್ಲಿನ ಇಲ್ಲ-ಸಲ್ಲದ ಮೂಢನಂಬಿಕೆಗಳಿಂದ ಸಮಾಜದಲ್ಲಿ ಮನುಷ್ಯ ಹೇಗೆ ನರಳುತ್ತಿದ್ದಾನೆ. ಯಾವ ರೀತಿ ಶೋಷಣೆಗೆ ಒಳಗಾಗುತ್ತಿದ್ದಾನೆ ಎನ್ನುವುದರ ವಿರುದ್ಧವಾಗಿ ಪೆರಿಯಾರ್ ಧ್ವನಿ ಎತ್ತಿದ್ದಾರೆ. ಅವರನ್ನು ಬ್ರಾಹ್ಮಣರ ವಿರುದ್ಧವಾದ ಒಂದು ಶಕ್ತಿ ಎಂದು ಹೇಳುತ್ತಾರೆ. ಆದರೆ, ಪೆರಿಯಾರ್ ಬ್ರಾಹ್ಮಣರ ವಿರುದ್ಧವಾಗಿ ಅಲ್ಲ, ಬ್ರಾಹ್ಮಣ್ಯದ ವಿರುದ್ಧವಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂವಿಧಾನ ತಜ್ಞ, ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಹಿರಿಯ ಸಾಹಿತಿ ಡಾ. ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ್, ನಿವೃತ್ತ ಐಜಿಪಿ ಕೆ.ಅರಕೇಶ್, ಮತ್ತಿತರರು ಹಾಜರಿದ್ದರು.






