ಕಸಾಪ ಪುನಃಶ್ಚೇತನಕ್ಕೆ ಒಗ್ಗಟ್ಟಿನ ಕರೆ: ಜಾಣಗೆರೆ ವೆಂಕಟರಾಮಯ್ಯ ಬೆಂಬಲಕ್ಕೆ ಸಮಾಲೋಚನಾ ಸಭೆ

ಜಾಣಗೆರೆ ವೆಂಕಟರಾಮಯ್ಯ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ನ ಪುನಃಶ್ಚೇತನಕ್ಕಾಗಿ ಹಾಗೂ ಮುಂಬರುವ ಚುನಾವಣೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಶನಿವಾರ ನಗರದ ಗಾಂಧಿ ಭವನದಲ್ಲಿ ‘ಸಮಾಲೋಚನಾ ಸಭೆ’ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕಸಾಪದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಇರಬಾರದು. ಕನ್ನಡಿಗರ ಅಸ್ಮಿತೆ ಹಾಗೂ ಆತ್ಮಗೌರವವನ್ನು ಕಾಪಾಡುವ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ ಉಳಿಯಬೇಕು. ವೈಯಕ್ತಿಕ ಗೆಲುವಿಗಿಂತ ಕನ್ನಡದ ಗೆಲುವೇ ಮುಖ್ಯವಾಗಿದ್ದು, ಕಸಾಪದ ಪುನರ್ ಸಂಘಟನೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ನ್ನು ಅದರ ಹಿಂದಿನ ಗೌರವದ ಸ್ಥಾನಕ್ಕೆ ಮರಳಿಸಿ, ಕನ್ನಡಿಗರ ನಿಜವಾದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮಾತನಾಡಿ, ಕನ್ನಡದ ಪರವಾಗಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದ್ದು, ಕನ್ನಡ ಸಾಹಿತ್ಯ ಪರಿಷತ್ ತನ್ನ ಸ್ವಾಯತ್ತತೆ ಹಾಗೂ ಚೈತನ್ಯವನ್ನು ಮರಳಿ ಪಡೆಯಬೇಕಾದರೆ ಸಂಘಟಿತ ಹೋರಾಟ ಅಗತ್ಯ. ಕಸಾಪ ಅಧ್ಯಕ್ಷ ಸ್ಥಾನವು ಅಧಿಕಾರದ ಸ್ಥಾನವಲ್ಲ, ಜನಸೇವೆಯ ಹೊಣೆಗಾರಿಕೆಯ ಸ್ಥಾನ ಎಂದು ಹೇಳಿದರು.
ಸಭೆಯಲ್ಲಿ ಸಿ.ಕೆ.ರಾಮೇಗೌಡ, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮತ್ತಿತರರು ಉಪಸ್ಥಿತರಿದ್ದರು.
‘ಕಸಾಪದಲ್ಲಿ ನಡೆದಿರುವ ಅಕ್ರಮಗಳನ್ನು ನಿವಾರಿಸಿ, ಕನ್ನಡಾಭಿಮಾನವನ್ನು ಕೇಂದ್ರವಾಗಿಟ್ಟುಕೊಂಡು ಅದನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ಹೊಂದಿದ್ದೇನೆ. ಕನ್ನಡಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿ ಪರಿಷತ್ನ ಘನತೆಯನ್ನು ಮರು ಸ್ಥಾಪಿಸೋಣ’
-ಜಾಣಗೆರೆ ವೆಂಕಟರಾಮಯ್ಯ, ಹಿರಿಯ ಸಾಹಿತಿ






