ಅಕ್ರಮ ವಲಸಿಗರ ಪತ್ತೆಗೆ ಬೆಂಗಳೂರು ಪೊಲೀಸರಿಂದ ‘ಆಪರೇಷನ್ ಮುಕ್ತಾ' ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು ಬೆಂಗಳೂರು ಪೊಲೀಸರು ಭಾರಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ‘ಆಪರೇಷನ್ ಮುಕ್ತಾ’ ಹೆಸರಿನಲ್ಲಿ ಶನಿವಾರ ಮುಂಜಾನೆ 6 ಗಂಟೆಯಿಂದಲೇ ಆರಂಭವಾಗಿರುವ ಈ ಕಾರ್ಯಾಚರಣೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಬೆಂಗಳೂರಿನ ವೈಟ್ಫೀಲ್ಡ್ ವಿಭಾಗದಲ್ಲಿ ಡಿಸಿಪಿ ಸೈದುಲು ಅಡಾವತ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ವೈಟ್ಫೀಲ್ಡ್, ಕಾಡುಗೋಡಿ, ಮಾರತ್ಹಳ್ಳಿ, ಬೆಳ್ಳಂದೂರು ಹಾಗೂ ಮಹದೇವಪುರ ಸೇರಿದಂತೆ ಹಲವು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ಅಕ್ರಮವಾಗಿ ನೆಲೆಸಿದ್ದ ಹಲವು ವಿದೇಶಿ ಪ್ರಜೆಗಳು ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿ ನಡೆಸಲಾದ ಸ್ಥಳಗಳಲ್ಲಿ ವಿದೇಶಗಳಿಂದ ಬಂದಿರುವ ಅನೇಕರು ಅಕ್ರಮ ವಾಸಿಸುತ್ತಿದ್ದು, ಪ್ರತಿಯೊಬ್ಬರ ಗುರುತಿನ ಚೀಟಿ ಹಾಗೂ ಅಧಿಕೃತ ದಾಖಲಾತಿಗಳನ್ನು ಪೊಲೀಸರು ಕೂಲಂಕಶವಾಗಿ ಪರಿಶೀಲಿಸಿದ್ದಾರೆ. ಇಲ್ಲಿ ನೆಲೆಸಿರುವ ಬಹುತೇಕರು ದಿನಗೂಲಿ ಕೆಲಸಗಾರರಾಗಿ ಹಾಗೂ ಸಮೀಪದ ಅಪಾರ್ಟ್ಮೆಂಟ್ಗಳಲ್ಲಿ ಭದ್ರತಾ ಸಿಬ್ಬಂದಿ ಅಥವಾ ಮನೆಗೆಲಸದವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಬೆಂಗಳೂರಿನಾದ್ಯಂತ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಹಿಂದೆಯೂ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಿದ್ದೇವೆ. ಸೂಕ್ತ ದಾಖಲೆಗಳಿಲ್ಲದೇ ಅಕ್ರಮವಾಗಿ ನೆಲೆಸಿರುವವರು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಪ್ರಕ್ರಿಯೆಗಾಗಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡುತ್ತೇವೆ. ಅವರು ಪರಿಶೀಲಿಸಿ ಕೊಡುವ ಮಾಹಿತಿ ಆಧರಿಸಿ ಕಾನೂನಾತ್ಮಕವಾಗಿ ಅವರ ದೇಶಗಳಿಗೆ ಗಡಿಪಾರು ಮಾಡಲಿದ್ದೇವೆ. ಈಗಾಗಲೇ ವೈಟ್ಫೀಲ್ಡ್ ವಿಭಾಗದಲ್ಲಿ ಅಂಥಹ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ’
-ಸೈದುಲು ಅಡಾವತ್, ವೈಟ್ಫೀಲ್ಡ್ ವಿಭಾಗದ ಡಿಸಿಪಿ.






