ಜನಪದ ಕಲೆಗಳು ದೈಹಿಕ ವ್ಯಾಮಾಮವಾಗಿವೆ: ಪ್ರೊ.ಹಿ.ಚಿ.ಬೋರಲಿಂಗಯ್ಯ

ರಾಮನಗ : ಪಟಕುಣಿತವು ಗ್ರಾಮದೇವತೆಗಳ ಹಬ್ಬದ ಆಚರಣೆಯ ಮೂಲಕ ಸಂಪ್ರದಾಯ ರೂಪದಲ್ಲಿ ಸಾಗಿ ಬಂದಿದೆ. ಪಟದ ಗತ್ತುಗಳ ಹೆಜ್ಜೆಗಳ ಬಗ್ಗೆ ಮಾತನಾಡುವ ಜನಪದ ಕಲೆಗಳು ದೈಹಿಕ ವ್ಯಾಯಾಮವಾಗಿವೆ ಎಂದು ರಾಜ್ಯ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ತಿಳಿಸಿದರು.
ರಾಮನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ “ಲೋಕಸಿರಿ ತಿಂಗಳ ಅತಿಥಿ-119, ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ಪ್ರತಿ ತಿಂಗಳ ನಡೆಯುವ ತಿಂಗಳ ಅತಿಥಿ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗೇಗೌಡರು ಕಟ್ಟಿದ ಈ ಜಾನಪದ ಲೋಕ ನಶಿಸುತ್ತಿರುವ ಕಲೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮಾತನಾಡಿ, ಕಲೆ ಕಲಾವಿದರನ್ನು ಗೌರವಿಸುವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯಕ್ಷಗಾನ ಜಾನಪದ ನೃತ್ಯ ಪಟು ರೇಣುಕಾಪ್ರಸಾದ್ ಮಾತನಾಡಿ, ಜಾನಪದ ಲೋಕದಲ್ಲಿ ಪ್ರತಿ ವರ್ಷವೂ ಜಾನಪದ ಡಿಪ್ಲೋಮಾ ಮೂಲಕ ವಿವಿಧ ಕಲೆಗಳ ತರಬೇತಿ ನೀಡುವ ಮೂಲಕ ಕಲೆಯನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ತಿಂಗಳ ಅತಿಥಿ ಕಾರ್ಯಕ್ರಮ ಇತರೆ ಕಾರ್ಯಕ್ರಮಕ್ಕೆ ವಿಭಿನ್ನವೂ ವಿಶಿಷ್ಟ ಕಾರ್ಯಕ್ರಮವಾಗಿದೆ. ಇಲ್ಲಿ ಗುರುತಿಸಲಾದ ಕಲಾವಿದರನ್ನು ಬೇರೆ ಬೇರೆ ಸಂಘಟನೆಯವರು ಕರೆದು ಗೌರವಿಸುತ್ತಾರೆ ಎಂದರು.
ಸಂಪಾದಕರಾದ ಸು.ತ.ರಾಮೇಗೌಡ ಮಾತನಾಡಿ, ಜಾನಪದ ಕಲಾವಿದರು ಕಲೆಗಳನ್ನು ಪ್ರದರ್ಶಿಸುತ್ತಾ ಹೆಚ್ಚು ಶಕ್ತಿಶಾಲಿಯಾಗಿದ್ದಾರೆ. ಅದಕ್ಕಾಗಿ ಜಾನಪದ ಲೋಕ ಕಟ್ಟಿದ ನಾಗೇಗೌಡರು ಕಲೆಗಳನ್ನು ಬೆಳೆಸುತ್ತಾ ಬಲಿಷ್ಠರಾಗಿದ್ದರು. ಇಷ್ಟೊಂ ದು ವಿಸ್ತಾರವಾಗಿ ಜಾನಪದ ಲೋಕವನ್ನು ಕಟ್ಟಿದ್ದಾರೆ. ಈ ಜಾನಪದ ಲೋಕಕ್ಕೆ ಹೆಚ್ಚಿನದಾಗಿ ಸರಕಾರದ ಪ್ರೋತ್ಸಾಹ ಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಡಪ್ಪ ಅವರು ಪಟಕುಣಿತ ಕಲೆ ಕಲಿತ ಮತ್ತು ಇತರರಿಗೆ ಕಲಿಸಿದ ಬಗ್ಗೆ ಮಾತನಾಡಿದರು. ರಾಮಾಯಣ, ಕುರುಕ್ಷೇತ್ರದಲ್ಲಿ ನಟಿಸುತ್ತಿದ್ದ ಬಗ್ಗೆ ರಾವಣ ದರ್ಬಾರ್ ಹಾಡನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅವರ ತಂಡದ ರಾಮಚಂದ್ರಪ್ಪ ಅವರು ಪಟಕುಣಿತದ ಗತ್ತುಗಳನ್ನು ಅಭಿನಯದ ಮೂಲಕ ತೋರಿಸಿಕೊಟ್ಟರು. ಚಿಕ್ಕನರಸಯ್ಯ ಅವರು ಕಾಡಪ್ಪ ಅವರು ತಮಗೆ ತರಬೇತಿ ನೀಡಿದ ಬಗ್ಗೆ ವಿವರಿಸಿದರು.
ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಮ್ಯೂಸಿಯಂ ಕ್ಯೂರೇಟರ್ ಡಾ.ರವಿ ಯು.ಎಂ. ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಹನುಮಂತೇಗೌಡನದೊಡ್ಡಿ ಹಿರಿಯ ಪಟಕುಣಿತ ಕಲಾವಿದರಾದ ಸಂಜೀವಯ್ಯ ಮತ್ತು ತಂಡದವರು, ಡಾ.ಸಂದೀಪ್ ಕೆ.ಎಸ್., ಜಾನಪದ ಲೋಕದ ಸಿಬ್ಬಂದಿ, ಡಿಪ್ಲೊ ಮಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.






