ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಲು ಆಗ್ರಹಿಸಿ ಬಿಜೆಪಿ ಧರಣಿ

ಬೆಂಗಳೂರು : ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನವನ್ನು ನೀಡಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಶಾಸಕರು, ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿನ ಭುವನೇಶ್ವರಿ ಪುತ್ಥಳಿ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜನಸಂಖ್ಯೆಯಲ್ಲಿ ಮಹಿಳೆಯರು ಶೇ.50ರಷ್ಟು ಇದ್ದಾರೆ. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಪ್ರಧಾನಿ ಮೋದಿ ನೇತೃತ್ವದ ಸರಕಾರ ಮಹಿಳೆಯರಿಗೆ 33ರಷ್ಟು ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಂಡಾಗ ಕಾಂಗ್ರೆಸ್ ಅದನ್ನು ವಿರೋಧಿಸಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಪ್ರಾತಿನಿಧ್ಯ ನಿರಾಕರಿಸುವ ಮೂಲಕ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಒಬ್ಬ ಮಹಿಳೆಯ ಹೆಸರೂ ಸಚಿವರಾಗಿ ಸೇರ್ಪಡೆಯಾಗಲಿದೆ ಎಂಬ ವರದಿಯಾಗಿತ್ತು. ಆದರೆ ಅಂತಿಮವಾಗಿ ಆ ಹೆಸರನ್ನು ಕೈಬಿಡಲಾಗಿದೆ. ಮಹಿಳೆಯರನ್ನು ಸಂಪುಟದಿಂದ ದೂರವಿಡುವ ಮೂಲಕ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಅಪಮಾನ ಮಾಡಿದೆ ಎಂದು ಅವರು ಟೀಕಿಸಿದರು.
ನಿರ್ಬಂಧ ಹೇರುವ ಪ್ರಯತ್ನ: ಆರೆಸ್ಸೆಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾರ್ವಜನಿಕ ಸಭೆಗಳಿಗೆ ಅನುಮತಿ ಕಡ್ಡಾಯಗೊಳಿಸುವಂತಹ ನಿರ್ಧಾರಗಳನ್ನು ಸರಕಾರ ಕೈಗೊಳ್ಳುತ್ತಿದೆ. ಸಿಎಂ ಹಾಗೂ ಗೃಹ ಸಚಿವರು ನೇರವಾಗಿ ಆರೆಸ್ಸೆಸ್ ಹೆಸರನ್ನು ಉಲ್ಲೇಖಿಸದಿದ್ದರೂ, ಸರಕಾರದ ಉದ್ದೇಶ ಸ್ಪಷ್ಟ. ಸದನದಲ್ಲಿ ಆರೆಸ್ಸೆಸ್ ಪ್ರಾರ್ಥನೆಯ ಉಲ್ಲೇಖ ಮಾಡಿದ್ದ ಸಿಎಂ ನಿಲುವು ಇದೀಗ ಬಯಲಾಗಿದೆ ಎಂದು ಅವರು ದೂರಿದರು.
ಸರಕಾರಕ್ಕೆ ಧೈರ್ಯವಿದ್ದರೆ ಆರೆಸ್ಸೆಸ್ ನಿಷೇಧಿಸುವ ಪ್ರಯತ್ನ ಮಾಡಲಿ ಎಂದು ಸವಾಲು ಹಾಕಿದ ವಿಜಯೇಂದ್ರ, ಆರೆಸ್ಸೆಸ್ ಯಾವ ದೇಶವಿರೋಧಿ ಚಟುವಟಿಕೆ ನಡೆಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಜವಾಬ್ದಾರಿಗಳ ಬಗ್ಗೆ ಗಮನಹರಿಸುವ ಬದಲು ಪದೇ ಪದೇ ಆರೆಸ್ಸೆಸ್ ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
‘ರಾಜ್ಯ ಸರಕಾರವು ಒಬ್ಬರೇ ಒಬ್ಬ ಮಹಿಳೆಯರಿಗೂ ಸಂಪುಟದಲ್ಲಿ ಅವಕಾಶ ನೀಡದೆ ಮಹಿಳೆಯರಿಗೆ ದ್ರೋಹ ಬಗೆದಿದೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ ಇಲ್ಲದಂತಾಗಿದೆ. ಮಹಿಳೆಯರಿಗೆ ಹಕ್ಕು, ಸ್ಥಾನಮಾನವನ್ನು ನೀಡದ ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರದ ನಿಲುವನ್ನು ನಾವು ಖಂಡಿಸುತ್ತೇವೆ’
-ಆರ್.ಅಶೋಕ್ ವಿಪಕ್ಷ ನಾಯಕ






