ಪೊಲೀಸ್ ಕಾನ್‍ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ: ತಾತ್ಕಾಲಿಕ ಪಲಿತಾಂಶ ಪ್ರಕಟ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚಿಸಲಾದ ಪೊಲೀಸ್ ಇಲಾಖೆಯ ಉಳಿಕೆ ಮೂಲ ವೃಂದದ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ, ಪೊಲೀಸ್ ಇಲಾಖೆಯ ಉಳಿಕೆ ಮೂಲ ವೃಂದದ ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ ಆ.2ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಆ.3ರಂದು ಪ್ರಕಟಿಸಿ, ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ ಆ.6ರ ಬೆಳಗ್ಗೆ 10:30ರ ವರೆಗೆ ಕಾಲಾವಕಾಶ ನೀಡಲಾಗಿತ್ತು.
ಈ ಸಂಬಂಧ ಪ್ರಾಧಿಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಗಳ ಮೂಲಕ ಪರಿಶೀಲಿಸಿ, ಪರಿಷ್ಕೃ ತ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಆ.7ರಂದು ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ಆ.17ರ ಮಧ್ಯಾಹ್ನ 12:30ರೊಳಗೆ https://cetonline.karnataka.gov.in/kea/ ಮೂಲಕ ಸಲ್ಲಿಸಬೇಕು. ಪೂರಕ ದಾಖಲೆಗಳಿಲ್ಲದ ಹಾಗೂ ಕೀ ಉತ್ತರಗಳಿಗೆ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.






