ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಶಿಕ್ಷಣ ನಿರ್ಲಕ್ಷ್ಯ ವಿಷಾದನೀಯ: ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ

ನರೇಂದ್ರ ಮೋದಿ | Photo Credit : PTI
ಬೆಂಗಳೂರು : ಸ್ವಾತಂತ್ರ್ಯ ದಿನದ ಪ್ರಯುಕ್ತ ದಿಲ್ಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ ಶಾಲಾ ಶಿಕ್ಷಣದ ಪ್ರಸ್ತಾಪವೇ ಇಲ್ಲದಿರುವುದು ತೀವ್ರ ಆತಂಕ ಮತ್ತು ವಿಷಾದ ಉಂಟುಮಾಡಿದೆ ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ತಿಳಿಸಿದೆ.
ರವಿವಾರ ಈ ಕುರಿತು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ. ಪ್ರಕಟನೆ ನೀಡಿದ್ದು, 1966ರ ಕೊಠಾರಿ ಶಿಕ್ಷಣ ಆಯೋಗ ಸ್ಪಷ್ಟವಾಗಿ ಹೇಳಿದಂತೆ ‘ದೇಶದ ಭವಿಷ್ಯ ಆಕೆಯ ತರಗತಿಗಳಲ್ಲಿ ರೂಪಗೊಳ್ಳುತ್ತದೆ’. ಜಿಡಿಪಿಯ ಶೇ.6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿತ್ತು. ಒಂದು ರಾಷ್ಟ್ರವನ್ನು ವಿಕಸಿತಗೊಳಿಸಲು ಬೇಕಾದ ವೈಜ್ಞಾನಿಕ ಮನೋಭಾವ, ಜ್ಞಾನ, ಕೌಶಲ್ಯ, ನೈತಿಕತೆ ಎಲ್ಲವೂ ಶಾಲೆಯಲ್ಲಿಯೇ ನಿರ್ಮಾಣವಾಗುತ್ತದೆ. ಅಂತಹ ಅಡಿಪಾಯದ ಬಗ್ಗೆ ಮಾತನಾಡದೇ ‘ವಿಕಸಿತ ಭಾರತ’ದ ಕನಸು ಕಾಣುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಮೂಲ ಸೌಕರ್ಯ, ಆರ್ಥಿಕತೆ, ರಕ್ಷಣೆ, ತಂತ್ರಜ್ಞಾನ ಎಲ್ಲವೂ ಸರಿ. ಆದರೆ 25 ಕೋಟಿ ಮಕ್ಕಳ ಭವಿಷ್ಯ ರೂಪಿಸುವ ಶಾಲಾ ಶಿಕ್ಷಣದ ಬಗ್ಗೆ ಒಂದು ಮಾತಿಲ್ಲ. ಶಿಕ್ಷಣ ಹಕ್ಕು ಕಾಯ್ದೆ ಜಾರಿ, ತೀವ್ರ ಶಿಕ್ಷಕರ ಕೊರತೆ, ಸಾರ್ವಜನಿಕ ಶಾಲೆಗಳ ಗುಣಮಟ್ಟ, ಶಾಲೆಗೆ ಬಿಡುವ ಮಕ್ಕಳು, ಸಮಾನ ಶಾಲಾ ವ್ಯವಸ್ಥೆ ಇದಾವುದರ ಬಗ್ಗೆಯೂ ಪ್ರಸ್ತಾಪವಿಲ್ಲ. ಇದು ಭಾರತದ ಮಕ್ಕಳನ್ನು ನಿರ್ಲಕ್ಷಿಸಿದಂತೆ. ಶಿಕ್ಷಣದ ವಿಷಯ ಜಂತರ್ ಮಂತರ್ ಹೋರಾಟದ ನಿರ್ಣಾಯಕ ಪ್ರಶ್ನೆಯಾಗಿತ್ತು ಎಂಬುದು ಮುಖ್ಯ ಎಂದು ತಿಳಿಸಿದ್ದಾರೆ.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂದು ಹೇಳುತ್ತಲೇ, ಗುಣಮಟ್ಟದ ಸಮಾನ ಶಾಲಾ ಶಿಕ್ಷಣದ ರಾಷ್ಟ್ರೀಯ ಗುರಿಯನ್ನು ಮರೆತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧ. ಬಲಿಷ್ಠ ಸಾರ್ವಜನಿಕ ಶಾಲಾ ವ್ಯವಸ್ಥೆ ಇಲ್ಲದೆ ಖಾಸಗಿ ಮತ್ತು ಸರಕಾರಿ ಶಾಲೆಗಳ ನಡುವಿನ ಅಂತರ ಹೆಚ್ಚಿ, ಅಸಮಾನತೆ ಮತ್ತಷ್ಟು ಗಾಢವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ‘ವಿಕಸಿತ ಭಾರತ’ ಚೌಕಟ್ಟಿನಲ್ಲಿ ಸಮಾನ ಶಾಲಾ ಶಿಕ್ಷಣಕ್ಕೆ ಪ್ರಮುಖ ಸ್ಥಾನ ನೀಡಬೇಕು. ಕೊಠಾರಿ ಆಯೋಗ ಶಿಫಾರಸಿನಂತೆ ಜಿಡಿಪಿಯ ಕನಿಷ್ಠ ಶೇ.6ರಷ್ಟನ್ನು ಶಾಲಾ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.






