ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಪ್ರವೇಶ: ಅಣಕು ಫಲಿತಾಂಶ ಪ್ರಕಟ

ಬೆಂಗಳೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶದ ಮೊದಲ ಸುತ್ತು ಹಾಗೂ ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್‍ಗಳ 2ನೇ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.
ಈ ಕುರಿತು ಪ್ರಕಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆ.13ರಂದು ಬೆಳಗ್ಗೆ 9ಗಂಟೆವರೆಗೆ ಅಭ್ಯರ್ಥಿಗಳು ನಮೂದಿಸಿದ್ದ ಇಚ್ಛೆಗಳನ್ನು ಅಣಕು ಫಲಿತಾಂಶಕ್ಕೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಆ.20ರ ಬೆಳಗ್ಗೆ 9ಗಂಟೆವರೆಗೆ ಇಚ್ಚೆಗಳನ್ನು ಹೊಸದಾಗಿ ಸೇರಿಸುವುದಕ್ಕೆ, ಬೇಡವಾದಲ್ಲಿ ತೆಗೆದುಹಾಕುವುದಕ್ಕೆ, ಕ್ರಮಾಂಕ ಬದಲಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ
ಯುಜಿ ನೀಟ್-26ರಲ್ಲಿ ಅರ್ಹತೆ ಪಡೆದು, ಇದುವರೆಗೂ ಅರ್ಜಿಯನ್ನೇ ಸಲ್ಲಿಸದಿರುವ ಕ್ಲಾಸ್ - ಎ ಮತ್ತು ಕ್ಲಾಸ್ -ವೈ ಅಭ್ಯರ್ಥಿಗಳಿಗೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಆ.18ರಂದು ಸಂಜೆ 6ರವರೆಗೆ ಅವಕಾಶ ನೀಡಲಾಗಿದೆ. ಅವರು ನಂತರ ನೀಟ್ ರೋಲ್ ನಂಬರ್ ಜೋಡಣೆ ಮಾಡಿಕೊಂಡು ವೆರಿಫಿಕೇಷನ್ ಸ್ಲಿಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಬಳಿಕ ಆಪ್ಷನ್ಸ್ ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಇದು ಅಣಕು ಫಲಿತಾಂಶವಾಗಿರುವ ಕಾರಣ ಯಾರೂ ಕಾಲೇಜಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಅಂತಿಮ ಸುತ್ತಿನ ಫಲಿತಾಂಶ ಬಂದ ನಂತರ ವೇಳಾಪಟ್ಟಿ ಪ್ರಕಟಿಸಲಿದ್ದು, ಆ ನಂತರವೇ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‍ಲೋಡ್ ಮಾಡಿಕೊಂಡೇ ಕಾಲೇಜಿಗೆ ಹೋಗಬೇಕಾಗುತ್ತದೆ ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.






