ಛಾಯಾಗ್ರಾಹಕರು ಸಮಾಜದ ಕಣ್ಣುಗಳ್ಳಿದ್ದಂತೆ : ಸಭಾಪತಿ ಸಲೀಂ ಅಹ್ಮದ್

ಬೆಂಗಳೂರು : ‘ಛಾಯಾಗ್ರಾಹಕರು ನಮ್ಮ ಸಮಾಜದ ಕಣ್ಣುಗಳಿದ್ದಂತೆ. ಹೀಗಾಗಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ’ ಎಂದು ವಿಧಾನ ಪರಿಷತ್‍ನ ಸಭಾಪತಿ ಸಲೀಂ ಅಹ್ಮದ್ ಅವರು ಬಣ್ಣಿಸಿದ್ದಾರೆ.
ಶನಿವಾರ ಇಲ್ಲಿನ ಚಿತ್ರಕಲಾ ಪರಿಷತ್‍ನಲ್ಲಿ ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ‘‘Frozen Memories’" ಫೋಟೋ ಪ್ರದರ್ಶನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಒಂದು ಸಾವಿರ ಪದಗಳನ್ನು ಹೇಳುತ್ತದೆ’ ಎಂಬ ಮಾತಿನಂತೆ, ಛಾಯಾಚಿತ್ರಗಳು ಕೇವಲ ಒಂದು ಕ್ಷಣವನ್ನು ಸೆರೆಹಿಡಿಯುವುದಲ್ಲ, ಆ ಕ್ಷಣದ ಭಾವನೆ, ಘಟನೆ, ಬದುಕು ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗಳಿಗಾಗಿ ಉಳಿಸುತ್ತವೆ ಎಂದರು.
ಸಮಾಜದಲ್ಲಿ ನಡೆಯುವ ಅನೇಕ ಮಹತ್ವದ ಘಟನೆಗಳು, ಸಂಭ್ರಮಗಳು, ಸಾಧನೆಗಳು, ನೋವು-ನಲಿವುಗಳು ಹಾಗೂ ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದ ಮೂಲಕ ದಾಖಲಿಸುವ ಮೂಲಕ ಛಾಯಾಗ್ರಾಹಕರು ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಛಾಯಾಗ್ರಾಹಕರ ಸೇವೆ ಅನನ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಛಾಯಾಗ್ರಾಹಕರು ಬಿಸಿಲು, ಮಳೆ, ಸಮಯದ ಮಿತಿ ಯಾವುದನ್ನೂ ಲೆಕ್ಕಿಸದೆ, ಸರಿಯಾದ ಕ್ಷಣವನ್ನು ಗುರುತಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಇಂದು ನಾವು ನೆನಪಿಸಿಕೊಳ್ಳುವ ಅನೇಕ ಘಟನೆಗಳ ದೃಶ್ಯ ದಾಖಲೆಗಳ ಹಿಂದೆ ಛಾಯಾಗ್ರಾಹಕರ ಪರಿಶ್ರಮವಿದೆ. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದರೂ, ಒಂದು ಕ್ಷಣವನ್ನು ಅರ್ಥಪೂರ್ಣವಾಗಿ ನೋಡುವ ಛಾಯಾಗ್ರಾಹಕರ ದೃಷ್ಟಿಗೆ ಪರ್ಯಾಯವಿಲ್ಲ. ಅವರ ಕ್ಯಾಮೆರಾದಲ್ಲಿ ಸೆರೆಯಾಗುವ ಒಂದು ಚಿತ್ರ ಮುಂದಿನ ದಿನಗಳಲ್ಲಿ ಇತಿಹಾಸದ ಅಮೂಲ್ಯ ದಾಖಲೆಯಾಗಬಹುದು ಎಂದು ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು.
ಪ್ರದರ್ಶನದಲ್ಲಿರುವ ಪ್ರತಿಯೊಂದು ಚಿತ್ರವೂ ಛಾಯಾಗ್ರಾಹಕರ ಪ್ರತಿಭೆ, ಸೃಜನಶೀಲತೆ, ತಾಳ್ಮೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋ ತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಛಾಯಾಗ್ರಾಹಕರ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು. ಅಲ್ಲದೆ, ಛಾಯಾಗ್ರಾಹಕರಿಗೆ ಸಹಕಾರ ಇರಲಿದೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಛಾಯಾಗ್ರಹಣವು ಕೇವಲ ಕಲೆಯಲ್ಲ, ಸಮಾಜದ ಆಗು-ಹೋಗುಗಳನ್ನು ದಾಖಲಿಸುವ ಮಹತ್ವದ ಮಾಧ್ಯಮವಾಗಿದೆ ಎಂದು ಹೇಳಿದರು.
ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರು ತಮ್ಮ ಕ್ಯಾಮೆರಾದ ಮೂಲಕ ಸಮಾಜದ ವಾಸ್ತವ ಚಿತ್ರಣವನ್ನು ಜನರ ಮುಂದಿಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಈ ವೇಳೆ ಹಿರಿಯ ಛಾಯಾಗ್ರಾಹಕರಾದ ಕೆಂಪಣ್ಣ, ಮೂರ್ತಿ, ರಾಜಶೇಖರ್ ಹಾಗೂ ಗೋಪಿಚಂದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಫೋಟೊ ಜರ್ನಲಿಸ್ಟ್ ಅಸೋಸಿಯೇಷನ್‍ನ ಅಧ್ಯಕ್ಷ ಮೋಹನ್‍ಕುಮಾರ್ ಸೇರಿದಂತೆ ಅಸೋಸಿಯೇಷನ್‍ನ ಪದಾಧಿಕಾರಿಗಳು, ಛಾಯಾಗ್ರಾಹಕರು, ಪತ್ರಕರ್ತರು ಉಪಸ್ಥಿತರಿದ್ದರು.






