ಆಧುನಿಕ ಜ್ಯೋತಿಷ್ಯ, ಮೂಢನಂಬಿಕೆಗಳ ವಿರುದ್ಧ ಜಾಗೃತಿಗೆ ಶಿಕ್ಷಣ ತಜ್ಞರ ಆಗ್ರಹ

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ಸಮಾಜದಲ್ಲಿ ಹೆಚ್ಚುತ್ತಿರುವ ಮೂಢನಂಬಿಕೆಗಳು ಹಾಗೂ ಆಧುನಿಕ ಜ್ಯೋತಿಷ್ಯ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದರ ಜತೆಗೆ ವೈಜ್ಞಾನಿಕ ಮನೋಭಾವದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ವಿಜ್ಞಾನಿಗಳು, ಚಿಂತಕರು, ಶಿಕ್ಷಣ ತಜ್ಞರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಶನಿವಾರ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ಐಎಂಎಫ್ಎಸ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ 9ನೇ ಆವೃತ್ತಿಯ ವಿಜ್ಞಾನಕ್ಕಾಗಿ ಭಾರತ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣ ತಜ್ಞರು ಸೇರಿದಂತೆ ಪ್ರಮುಖರು, ವೈಜ್ಞಾನಿಕ ಮನೋಭಾವ ಕುರಿತು ಜಾಗೃತಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಖಗೋಳ ಭೌತಶಾಸ್ತ್ರಜ್ಞ ಪ್ರೊ.ಪ್ರಜ್ವಲ್ ಶಾಸ್ತ್ರಿ, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಕಾರ್ಯದರ್ಶಿ ಬಿ.ದೀಪ್ತಿ, ಐಐಎ ಮಾಜಿ ನಿರ್ದೇಶಕ ಪ್ರೊ.ಜಯಂತ್ ಮೂರ್ತಿ, ಐಎಂಎಫ್ಎಸ್ ಕರ್ನಾಟಕ ಆಯೋಜನಾ ಸಮಿತಿಯ ಆನಂದ್ ರಾಜ್, ಪ್ರೊ.ಸಿ.ಪಿ.ರಾಜೇಂದ್ರನ್, ಅಖಿಲ ಭಾರತ ಉಳಿಸಿ ಶಿಕ್ಷಣ ಸಮಿತಿ ರಾಜ್ಯ ಸದಸ್ಯೆ ಸಿ.ಎಂ.ಐಶ್ವರ್ಯಾ, ರಾಜೇಶ್ ಭಟ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಇ.ಬಸವರಾಜು, ನಾಗೇಶ್ ಅರಳಿಕುಪ್ಪೆ, ಶ್ರೇಯಾ, ಪ್ರಮುಖರಿದ್ದರು.
ಹಕ್ಕೊತ್ತಾಯ
ಹವಮಾನ ಬಿಕ್ಕಟ್ಟುಗಳನ್ನು ಬಗೆಹರಿಸಲು ಪುರಾವೆ ಆಧಾರಿತ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಪರಿಸರ ನಾಶ ಆಗದಂತೆ ಕ್ರಮ ಕೈಗೊಳ್ಳಬೇಕು. ಮೂಢನಂಬಿಕೆಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ವಿಷಯಗಳನ್ನು ಪಠ್ಯದಲ್ಲಿ ಹೆಚ್ಚಾಗಿ ಅಳವಡಿಸಬೇಕು. ಕೇಂದ್ರ ಸರಕಾರ ತನ್ನ ಬಜೆಟ್ನಲ್ಲಿ ಶೇ.10ರಷ್ಟು, ರಾಜ್ಯ ಸರಕಾರ ಶೇ.30ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕು. ಸಾಮಾಜಿಕ ವಿಜ್ಞಾನ ಸಂಶೋಧನೆಯಲ್ಲಿ ಹೂಡಿಕೆ ಹೆಚ್ಚಿಸಬೇಕು ಎಂದು ವಿಜ್ಞಾನಿಗಳು, ಚಿಂತಕರು, ಶಿಕ್ಷಣ ತಜ್ಞರು ಹಕ್ಕೊತ್ತಾಯ ಮಂಡಿಸಿದರು.






