ʼಉರ್ದು, ಮರಾಠಿ ಶಿಕ್ಷಕರ ನೇಮಕʼ ಶೀಘ್ರವೇ ಅಧಿಸೂಚನೆ ಹೊರಡಿಸಬೇಕು : ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹ

ಸಾಂದರ್ಭಿಕ ಚಿತ್ರ | PC : AI
ಬೆಂಗಳೂರು : ರಾಜ್ಯದಲ್ಲಿ ಉರ್ದು, ಮರಾಠಿ ಶಿಕ್ಷಕರ ನೇಮಕ ಸಂಬಂಧ ಸರಕಾರದ ನಿರ್ಧಾರ ಸ್ವಾಗತಾರ್ಹ. ಅನುಮೋದನೆ ಪಡೆದ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳಿಗೆ ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಿ, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ನಸೀಂ ಅಹ್ಮದ್ ಆಗ್ರಹಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸುವುದು ಅವರ ಶಿಕ್ಷಣದ ಹಕ್ಕಿನ ಭಾಗ. ಆದುದರಿಂದ ಉರ್ದು, ಮರಾಠಿ ಸೇರಿ ಎಲ್ಲ ಭಾಷಾ ಮಾಧ್ಯಮಗಳ ಶಿಕ್ಷಕರ ಹುದ್ದೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಗುರುತಿಸಿ ಭರ್ತಿ ಮಾಡಬೇಕು. ಜೊತೆಗೆ 5 ವರ್ಷಗಳ ವಯೋಮಿತಿ ಸಡಿಲಿಕೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಇತರ ಬಾಕಿ ಬೇಡಿಕೆಗಳಿಗೂ ಸರಕಾರ ಸ್ಪಂದಿಸಬೇಕು ಎಂದು ಕೋರಿದ್ದಾರೆ.
ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಷಾ ಅಲ್ಪಸಂಖ್ಯಾತ ಮಾಧ್ಯಮಕ್ಕೂ ಸಮಾನ ಅವಕಾಶ ಕಲ್ಪಿಸಬೇಕು. 2026ರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಉರ್ದು, ಮರಾಠಿ ಸೇರಿ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶ ಕಲ್ಪಿಸಲಾಗಿಲ್ಲ ಎಂಬ ವಿಚಾರವನ್ನು ಆರಂಭದಿಂದಲೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸರಕಾರದ ಗಮನಕ್ಕೆ ತರುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ನಿರಂತರ ಪ್ರಯತ್ನಗಳ ಫಲವಾಗಿ ಆ.21ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದು ಭಾಷಾ ಅಲ್ಪಸಂಖ್ಯಾತ ಶಿಕ್ಷಕ ಅಭ್ಯರ್ಥಿಗಳ ಹೋರಾಟಕ್ಕೆ ಮುನ್ನಡೆಯಾಗಿದೆ. ಸರಕಾರದ ಈ ನಿರ್ಧಾರವನ್ನು ಆರ್ಥಿಕ ಇಲಾಖೆಯ ವರದಿ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬರಲಿದೆ ಎಂಬ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.






