ನೈಸ್ ಟೋಲ್ ಸಂಗ್ರಹದ ವಿರುದ್ಧ ಜೆಡಿಎಸ್‍ನಿಂದ ‘ನಥಿಂಗ್ ನೈಸ್' ಅಭಿಯಾನ

ಬೆಂಗಳೂರು : ನೈಸ್ ಯೋಜನೆ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ‘ನಥಿಂಗ್ ನೈಸ್' ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆಯಿಂದ 26 ವರ್ಷಗಳಿಂದ ಹಗರಣ ನಡೆಯುತ್ತಿದೆ. ರೈತರಿಗೆ ಪರಿಹಾರ ಸಿಕ್ಕಿಲ್ಲ, ಜನರ ಭೂಮಿ ಪಡೆದು ಅಭಿವೃದ್ಧಿ ಮಾಡಿಲ್ಲ. ನೈಸ್ ರಸ್ತೆಯಲ್ಲಿ ಓಡಾಡುವವರಿಗೆ ಸಮಸ್ಯೆ ಆಗುತ್ತಿದೆ ಎಂದು ದೂರಿದರು.
1997ರಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಆಗಿದೆ. ಆದರೆ, ಅದು ಉಲ್ಲಂಘನೆಯಾಗಿದೆ. ಯೋಜನೆಯಂತೆ 5 ಟೌನ್‍ಶಿಪ್ ಆಗಬೇಕಿತ್ತು, ಆದರೆ ಈ ಯೋಜನೆ ಇನ್ನೂ ಪೂರ್ಣವಾಗಿಲ್ಲ. 111 ಕಿ.ಮೀ ರಸ್ತೆ ಯೋಜನೆ ಪೂರ್ಣವಾಗಿಲ್ಲ. ಫೆರಿಫೆರಲ್ ರಸ್ತೆಯಲ್ಲಿ 2,193ಎಕರೆ ಭೂಸ್ವಾಧೀನ ಆಗಬೇಕಿತ್ತು, ಆದರೆ 554 ಎಕರೆ ಹೆಚ್ಚುವರಿಯಾಗಿ ಜಮೀನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಪಿಡಬ್ಲ್ಯೂಡಿ, ಕೆಐಎಡಿಬಿ ಭೂಸ್ವಾಧೀನಕ್ಕೆ ನೋಡಲ್ ಇಲಾಖೆಯಾಗಿರುತ್ತದೆ. 23ವರ್ಷ ಆದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಶೇ.65-70ರಷ್ಟು ರೈತರು ಬೀದಿಯಲ್ಲಿದ್ದಾರೆ. ಜಯಚಂದ್ರ ಜಂಟಿ ಸದನ ಸಮಿತಿ ವರದಿಯಲ್ಲಿ 22ಷರತ್ತುಗಳಲ್ಲಿ 16ಷರತ್ತು ಉಲ್ಲಂಘನೆಯಾಗಿದೆ ಎಂದು ವರದಿ ಇದೆ. ಹೈಕೋರ್ಟ್ ಜುಲೈನಲ್ಲಿ ಆದೇಶ ಮಾಡಿದೆ. ಭೂಮಿ ಕಳೆದುಕೊಂಡ ರೈತರಿಗೆ ಜಮೀನು ವಾಪಸ್ ಕೊಡಲು ಆದೇಶ ಮಾಡಿದೆ. ಸರಕಾರರ ಮಧ್ಯಪ್ರವೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಟೋಲ್ ಸಂಗ್ರಹ ನಿಲ್ಲಬೇಕು: ನೈಸ್ ರಸ್ತೆ ಟೋಲ್ ಸಂಗ್ರಹ ನಿಲ್ಲಬೇಕು. ರಸ್ತೆ ಪೂರ್ಣ ಆಗದೇ ಯಾಕೆ ಟೋಲ್ ಸಂಗ್ರಹ ಮಾಡುತ್ತೀರಾ? ರಸ್ತೆ ಪೂರ್ಣ ಆಗದೇ ಜನ ಯಾಕೆ ಟೋಲ್ ಕಟ್ಟಬೇಕು?. ನೈಸ್ ವಿರುದ್ಧ ನಥಿಂಗ್ ನೈಸ್ ಅಭಿಯಾನ ಶುರು ಮಾಡಿದ್ದೇವೆ. ಹೈಕೋರ್ಟ್ ಆದೇಶ ಪ್ರತಿ ಸೇರಿದಂತೆ ನೈಸ್‍ನ ಸಂಪೂರ್ಣ ದಾಖಲಾತಿ ಇರುವ nothingnice.net ವೆಬ್‍ಸೈಟ್ ಬಿಡುಗಡೆ ಮಾಡಿದ್ದೇವೆ. ಇದೊಂದು ಜನರ ಪರವಾದ ಅಭಿಯಾನ, ಇದು ಜನರ ಆಂದೋಲನವಾಗಬೇಕು ಎಂದರು.






