ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭ

ಬೆಂಗಳೂರು : ನಾಡಿನ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ನೆಮ್ಮದಿಯ ಜೀವನಕ್ಕೆ ಹೊಸ ಅರ್ಥ ಕಲ್ಪಿಸಿದ ರಾಷ್ಟ್ರವಾದಿ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಬಣ್ಣಿಸಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಮಕೃಷ್ಣ ಹೆಗಡೆ ಅವರು ಕೇವಲ ರಾಜಕೀಯ ನಾಯಕರಾಗಿರದೆ ಒಬ್ಬ ಶ್ರೇಷ್ಠ ಧುರೀಣರಾಗಿದ್ದರು. ಬಲಪಂಥೀಯ, ಎಡಪಂಥೀಯ ಎರಡು ವಿಚಾರಧಾರೆಗಳನ್ನು ಅರಿತಿದ್ದ ರಾಮಕೃಷ್ಣ ಹೆಗಡೆ ಅವರು, ವಯಸ್ಸಿನ ಅಂತರವಿಲ್ಲದೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಜನಸಂಘ ಹಾಗೂ ಜನತಾ ಪಕ್ಷದ ದಿನಗಳಿಂದಲೂ ಅವರೊಂದಿಗೆ ಸಂಪರ್ಕವಿತ್ತು ಎಂದರು.
ಹೆಗಡೆ ಅವರು ತಮ್ಮ ನಿಲುವುಗಳಲ್ಲಿ ದೃಢವಾಗಿ ನಿಂತು ಕರ್ನಾಟಕದಲ್ಲಿ ಹಲವು ಆಧುನಿಕ ಆಡಳಿತ ಸಂಸ್ಥೆಗಳಿಗೆ ಅಡಿಪಾಯ ಹಾಕಿದ ಧೈರ್ಯಶಾಲಿ ನಾಯಕರಾಗಿದ್ದರು. ಅವರ ಸಾರ್ವಜನಿಕ ಜೀವನವು ವಿಕೇಂದ್ರೀಕರಣ, ಹೊಣೆಗಾರಿಕೆ, ನಾಗರಿಕರ ಭಾಗವಹಿಸುವಿಕೆ, ಸಂಸದೀಯ ಒಕ್ಕೂಟ ವ್ಯವಸ್ಥೆ ಮತ್ತು ಸಂಸ್ಥೆಗಳ ಮೇಲಿನ ನಂಬಿಕೆಯಿಂದ ಮಾರ್ಗದರ್ಶಿಸಲ್ಪಟ್ಟಿತ್ತು. ಆಡಳಿತವನ್ನು ಜನರಿಗೆ ಹತ್ತಿರ ತಂದ ಕರ್ನಾಟಕ ಜಿಲ್ಲಾ ಪರಿಷತ್ತುಗಳು, ತಾಲೂಕು ಪಂಚಾಯತಿ ಸಮಿತಿಗಳು, ಮಂಡಲ ಮತ್ತು ನ್ಯಾಯ ಪಂಚಾಯತಿಗಳ ಕಾಯ್ದೆ-1985 ಅನ್ನು ನಾವು ನೋಡಬಹುದು ಎಂದು ಅವರು ಬಣ್ಣಿಸಿದರು.
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾತನಾಡಿ, 1983ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಆಡಳಿತ ನಡೆಸಿದ ಹೆಗಡೆ ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದರು. ಆಂಧ್ರಪ್ರದೇಶದಲ್ಲಿ ಮಾಜಿ ಸಿಎಂ ಎನ್‍ಟಿಆರ್ ಸರಕಾರಕ್ಕೆ ನೆರವಾಗುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ಹೆಗಡೆ ಅವರು, ತಮ್ಮ ವಿರುದ್ಧ ಆರೋಪ ಬಂದಾಗ ತಕ್ಷಣ ರಾಜೀನಾಮೆ ನೀಡಿದ ನೈತಿಕತೆಯನ್ನು ಹೊಂದಿದ್ದರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ನೋಡಿದ ಮುಖ್ಯಮಂತ್ರಿಗಳಲ್ಲಿ ರಾಮಕೃಷ್ಣ ಹೆಗಡೆ ಬಹಳ ಎತ್ತರದ ವ್ಯಕ್ತಿ. ಅವರಿಗೆ ಪ್ರಧಾನ ಮಂತ್ರಿಯಾಗುವ ಸಾಮಥ್ರ್ಯವಿತ್ತು ಮಾತ್ರವಲ್ಲದೆ, ಒಂದು ಬಾರಿ ಅವಕಾಶವೂ ಬಂದಿತ್ತು. ಕೇಂದ್ರದಲ್ಲಿ ಯೋಜನಾ ಉಪಾಧ್ಯಕ್ಷ, ಮಂತ್ರಿಯಾಗಿದ್ದರು. ಆದರೆ, ಅವರಿಗೆ ಪ್ರಧಾನಿ ಪಟ್ಟ ಸಿಕ್ಕಿಲ್ಲ ಎಂಬುವ ಕೊರಗು ನಮ್ಮಂತಹವರಿಗೆ ಇದೆ. ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಎಲ್ಲರಿಗೂ ಬೆಂಬಲ ನೀಡುವ ಜತೆಗೆ ಸ್ವಾತಂತ್ರ್ಯ ನೀಡಿದ್ದರು ಎಂದು ನೆನೆದರು.
ರಾಮಕೃಷ್ಣ ಹೆಗಡೆ ಈ ರಾಜ್ಯದ ಮೊದಲ ಕಾಂಗ್ರಸ್ಸೇತರ ಮುಖ್ಯಮಂತ್ರಿ. ಸುಮಾರು ಎರಡು ವರ್ಷ ಆಡಳಿತ ನಡೆಸಿದರು.ಆದರೂ, ಯಾರಿಗೆ ಸಾಮಥ್ರ್ಯವಿದೆ, ಶಕ್ತಿ ಇದೆ ಎಂದು ಪತ್ತೆ ಹಚ್ಚಿ ಬೆಳೆಸುವ ಗುಣ ಹೆಗಡೆಯವರಿಗೆ ಇತ್ತು. ಅವತ್ತು ಆಡಳಿತ ನಡೆಸುವುದು ಕಷ್ಟದ ಕೆಲಸವಾಗಿತ್ತು. ಆದರೆ, ರಾಮಕೃಷ್ಣ ಹೆಗಡೆಯವರು ಚಾಣಾಕ್ಷತನದಿಂದ ಎಡ, ಬಲ ಪಕ್ಷಗಳನ್ನು ಒಟ್ಟುಗೂಡಿಸಿ ಸರಕಾರ ನಡೆಸುವ ಕೆಲಸ ಮಾಡಿದರು. ನಾನು ಪಕ್ಷೇತರ ಶಾಸಕನಾಗಿ ಎಸ್.ಆರ್.ಬೊಮ್ಮಾಯಿ ಅವರ ಮೂಲಕ ಹೆಗಡೆ ಅವರಿಗೆ ಬೆಂಬಲ ಘೋಷಣೆ ಮಾಡಿದ್ದೆ. ನಂತರ ನನ್ನನ್ನು ಅವರೇ ಕರೆದು, ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮತ್ತೆ ನಾನು ಸಚಿವನಾಗಬೇಕು ಎಂದು ಕೇಳಿರಲಿಲ್ಲ. ಆದರೆ ರಾಮಕೃಷ್ಣ ಹೆಗಡೆ ಅವರು 1984ರಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು. ಆಗ ರೇಷ್ಮೆ ಇಲಾಖೆ ಖಾತೆ ನೀಡಿದ್ದರು. ಮೊದಲ ಬಾರಿ ಗೆದ್ದಿದ್ದರೂ ಕೂಡ ಸಚಿವ ಸ್ಥಾನ ನೀಡಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ರಾಮಕೃಷ್ಣ ಹೆಗಡೆ ಅವರು ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರಿ ಕಾರ್ಯಕ್ರಮ ಒಂದಕ್ಕೆ ಹೆಗಡೆ ಅವರ ಹೆಸರನ್ನಿಡಬೇಕೆಂದು ಇದೇ ವೇಳೆ ಸರಕಾರಕ್ಕೆ ಒತ್ತಾಯಿಸಿದರು.
ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷೆಯೂ ಆದ ರಾಮಕೃಷ್ಣ ಹೆಗಡೆ ಅವರ ಪುತ್ರಿ ಮಮತಾ ನಿಚಾನಿ ಮಾತನಾಡಿ, ನಮ್ಮ ತಂದೆ ಅವರನ್ನು ಎಲ್ಲರೂ ಅಣ್ಣನಂತೆಯೇ ಸಮಾನವಾಗಿ ಕಾಣುತ್ತಿದ್ದರು. ಅವರ ನಡೆ, ನುಡಿಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರವ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸೇರಿದಂತೆ ಪ್ರಮುಖರಿದ್ದರು.






