ಬೆಂಗಳೂರಿನಲ್ಲಿ ‘ಪಾರ್ಕಿಂಗ್ ನಿಯಮಗಳ ಜಾರಿ’ಗೆ ಸರಕಾರ ಚಿಂತನೆ

ಸಾಂದರ್ಭಿಕ ಚಿತ್ರ | PC : Image by evening_tao on Magnific
ಬೆಂಗಳೂರು : ರಾಜಧಾನಿಯಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರದೇಶಕ್ಕಾಗಿ ಸಮಗ್ರ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ 1.28 ಕೋಟಿಗಿಂತ ಹೆಚ್ಚು ನೋಂದಾಯಿತ ವಾಹನಗಳಿದ್ದು, ಜೊತೆಗೆ ಬೇರೆಡೆ ನೋಂದಾಯಿತವಾಗಿ ಬೆಂಗಳೂರಿನಲ್ಲಿ ಬಳಕೆಯಾಗುತ್ತಿರುವ ಅಂದಾಜು 15-20 ಲಕ್ಷ ವಾಹನಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ಸುಮಾರು 1.5 ಕೋಟಿ ವಾಹನಗಳಿವೆ. ವಾಹನಗಳು ಸುಮಾರು ಶೇ.95ರಷ್ಟು ಅವಧಿಯಲ್ಲಿ, ಮನೆಗಳು, ಕಚೇರಿಗಳು ಅಥವಾ ಇತರೆ ಸ್ಥಳಗಳಲ್ಲಿ ನಿಲುಗಡೆಗೊಂಡಿರುತ್ತವೆ. ಇದರಿಂದಾಗಿ ಪಾರ್ಕಿಂಗ್ ನಿರ್ವಹಣೆಯು ನಗರದ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ 2021ರಲ್ಲಿ ಪಾರ್ಕಿಂಗ್ ನೀತಿಯನ್ನು ಸರಕಾರ ರೂಪಿಸಿದೆ.
ನಗರದ ರಸ್ತೆಗಳ ಕೊರತೆ, ಕಿರಿದಾದ ರಸ್ತೆಗಳು ಮತ್ತು ಹೆಚ್ಚುತ್ತಿರುವ ಸಂಚಾರ ದಟ್ಟಣೆಯು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿವೆ. ವಾಹನಗಳ ಸಂಚಾರಕ್ಕಾಗಿ ನಿರ್ಮಿಸಲಾದ ರಸ್ತೆಗಳ ಬಹು ಭಾಗ ವಾಹನಗಳ ನಿಲುಗಡೆಗಷ್ಟೇ ಸೀಮಿತವಾಗಿದೆ. ವಾಹನಗಳ ನಿಲುಗಡೆಯಿಂದಾಗಿ ರಸ್ತೆಯ ಸಂಚಾರ ಸಾಮಥ್ರ್ಯವು ಅರ್ಧದಷ್ಟು ಕಡಿಮೆಯಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣದ ಅವಧಿಯು ಹೆಚ್ಚುತ್ತಿದೆ ಎಂದು ಜಿಬಿಎ ತಿಳಿಸಿದೆ.
ಸ್ಥಳೀಯರ, ಮಕ್ಕಳು ಮತ್ತು ವಯಸ್ಸಾದವರ ಸುರಕ್ಷಿತ ಬಳಕೆಗಾಗಿ ಇರುವ ವಸತಿ ಪ್ರದೇಶಗಳ ರಸ್ತೆಗಳು ಖಾಸಗಿ ವಾಹನಗಳ ಪಾಲಾಗುತ್ತಿವೆ. ಸಾರ್ವಜನಿಕರೆಲ್ಲರಿಗೂ ಸೇರಿದ ರಸ್ತೆಗಳು ಬಹುತೇಕ ಖಾಸಗಿ ಉಪಯೋಗಕ್ಕೆ ಸೀಮಿತವಾಗಿವೆ ಎಂದು ಜಿಬಿಎ ಹೇಳಿದೆ
ವಾಹನ ನಿಲುಗಡೆಗೆ ಕಡಿವಾಣ: ರಸ್ತೆಗಳು ಅಮೂಲ್ಯ ಸಾರ್ವಜನಿಕ ಆಸ್ತಿ. ಇವುಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ. ಈ ಆಸ್ತಿಗಳು ಎಲ್ಲರಿಗೂ ಸಮಾನವಾಗಿ ಸಿಗಬೇಕಾದರೆ ಖಾಸಗಿ ವಾಹನಗಳ ನಿಲುಗಡೆಗಾಗಿ ಬಳಸುವುದನ್ನು ನಿಯಂತ್ರಿಸಬೇಕಾಗುತ್ತದೆ ಎಂಬುವುದು ಸರಕಾರದ ಚಿಂತನೆಯಾಗಿದೆ. ಖಾಸಗಿ ವಾಹನಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯು ಪ್ರಮುಖವಾಗಿ ವಾಹನ ಮಾಲಕರದ್ದಾಗಿದ್ದು, ಸಾರ್ವಜನಿಕ ಸ್ಥಳಗಳ ಮೇಲಿನ ಸಾರ್ವಜನಿಕರ ಹಕ್ಕುಗಳು, ಖಾಸಗಿ ನಿಲುಗಡೆಯ ಅಗತ್ಯಗಳಿಗೆ ಅಧೀನವಾಗತಕ್ಕದ್ದಲ್ಲ. ಸಾರ್ವಜನಿಕ ಸ್ಥಳಗಳ ಬಳಕೆಯಲ್ಲಿ ವಾಹನ ಮಾಲಕರು ಮತ್ತು ವಾಹನ ಮಾಲಕರಲ್ಲದವರ ಹಕ್ಕುಗಳ ನಡುವೆ ಸಮತೋಲನ ಇರಬೇಕಾಗುತ್ತದೆ ಎಂದು ಸರಕಾರ ಚಿಂತಿಸಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 15 ಕಿ.ಮೀ. ಇದ್ದರೆ, ಸರಕಾರಿ ಬಸ್ಗಳ ಸರಾಸರಿ ವೇಗ ಗಂಟೆಗೆ 10 ಕಿ.ಮೀ. ಇರುತ್ತದೆ. ಸಂಚಾರ ದಟ್ಟಣೆಯು ಹೆಚ್ಚಾಗುತ್ತಲಿದ್ದು, ಸಂಚಾರ ಹದಗೆಡಲು ಪ್ರಮುಖ ಕಾರಣಗಳಲ್ಲಿ ಅನಿಯಂತ್ರಿತ ವಾಹನ ನಿಲುಗಡೆಯು ಒಂದಾಗಿರುತ್ತದೆ.
ಈ ಸಮಸ್ಯೆಗಳ ಕುರಿತು ಮಾರ್ಚ್ 19ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ, ಬೆಂಗಳೂರಿನ ಎಲ್ಲಾ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂಬುದನ್ನು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಈ ಪಾರ್ಕಿಂಗ್ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿವೆ. ಬಹು-ಹಂತದ ಹಾಗೂ ಇತರ ರೀತಿಯ ಪಾರ್ಕಿಂಗ್ ಸೌಲಭ್ಯಗಳು ಅವಶ್ಯವಿವೆ. ಆದರೆ ರಸ್ತೆ-ಮೇಲಿನ ಅನಿಯಮಿತ ಪಾರ್ಕಿಂಗ್ ನಿಯಂತ್ರಣವಿಲ್ಲದೆ ಇಂತಹ ಸೌಲಭ್ಯಗಳು ಕಾರ್ಯಸಾಧ್ಯವಾಗುವುದಿಲ್ಲ. ಹೆಚ್ಚುವರಿ ಪಾರ್ಕಿಂಗ್ ಸಾಮಥ್ರ್ಯವನ್ನು ಸೃಜಿಸಲೂ ನಿಯಂತ್ರಣಾ ಚೌಕಟ್ಟಿನ ಅವಶ್ಯಕತೆಯಿದೆ ಎಂಬುವುದು ಪಾಲಿಕೆಯ ಅಭಿಪ್ರಾಯವಾಗಿದೆ.
ಪಾರ್ಕಿಂಗ್ ನಿಯಮಗಳ ಯಶಸ್ವಿ ಅನುಷ್ಠಾನಕ್ಕೆ ಪರಿಣಾಮಕಾರಿ ಜಾರಿ ವ್ಯವಸ್ಥೆ ಅವಶ್ಯಕವಾಗಿರುತ್ತದೆ. ಗ್ರೇಟರ್ ಬೆಂಗಳೂರು ಪ್ರದೇಶದ ನಗರ ಪಾಲಿಕೆಗಳ ವ್ಯಾಪ್ತಿಯೊಳಗೆ, ಸಕ್ಷಮ ಪ್ರಾಧಿಕಾರಗಳಾದ ಪೊಲೀಸ್ ಮತ್ತು ನಗರಪಾಲಿಕೆಗಳು ಪಾರ್ಕಿಂಗ್ ವಿನಿಯಮಗಳನ್ನು ಜಾರಿಗೊಳಿಸಲು ಅಧಿಕಾರವನ್ನು ನೀಡಲು ಸರಕಾರ ತೀರ್ಮಾನಿಸಿದೆ.






