‘ಸಾಲ ವಿತರಣೆ’ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚನೆ

ಬೆಂಗಳೂರು : ಸಾಲ ವಿತರಣೆಯನ್ನು ಮತ್ತಷ್ಟು ವೇಗಗೊಳಿಸಬೇಕು. ಜತೆಗೆ ಹವಾಮಾನ ಬದಲಾವಣೆ ಸವಾಲುಗಳಿಗೆ ಸ್ಪಂದಿಸಬಲ್ಲ ಸದೃಢ ಹಣಕಾಸು ವ್ಯವಸ್ಥೆಯನ್ನು ನಿರ್ಮಿಸಲು ಬ್ಯಾಂಕುಗಳು, ಸರಕಾರದ ಇಲಾಖೆಗಳು, ಆರ್‍ಬಿಐ, ನಾಬಾರ್ಡ್ ಹಾಗೂ ಹಣಕಾಸು ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಕರೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿ (ಎಸ್‍ಎಲ್‍ಬಿಸಿ) ಸಭೆಯಲ್ಲಿ ರಾಜ್ಯದಲ್ಲಿನ ಬ್ಯಾಂಕಿಂಗ್ ಕ್ಷೇತ್ರದ ಕಾರ್ಯಕ್ಷಮತೆ, ಸಾಲ ವಿತರಣೆ, ಕೃಷಿ ಹಣಕಾಸು, ಮಹಿಳಾ ಸಬಲೀಕರಣ, ಡಿಜಿಟಲ್ ಹಣಕಾಸು ಸಾಕ್ಷರತೆ ಹಾಗೂ ಬ್ಯಾಂಕಿಂಗ್ ಮೂಲಸೌಕರ್ಯ ಬಲಪಡಿಸುವಿಕೆ ಕುರಿತ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿರುವ ಹವಾಮಾನ ವೈಪರೀತ್ಯ, ಬರ ಪರಿಸ್ಥಿತಿ ಕುರಿತು ವಿಸ್ತೃತ ಚರ್ಚೆ ನಡೆಯಿತು. ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳ ಜೀವನೋಪಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರು ಹಾಗೂ ದುರ್ಬಲ ವರ್ಗಗಳಿಗೆ ಸಕಾಲಿಕ ಮತ್ತು ಸಮರ್ಪಕ ಹಣಕಾಸು ನೆರವು ಒದಗಿಸಬೇಕು ಎಂದು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಲಾಯಿತು.
ಭೂಹೀನ ರೈತರು ಸೇರಿದಂತೆ ಸಮಾಜದ ತಳಮಟ್ಟದ ವರ್ಗಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಪಶುಸಂಗೋಪನೆ, ಕೋಳಿ ಸಾಕಾಣಿಕೆ ಹಾಗೂ ಮೀನುಗಾರಿಕೆ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಹೆಚ್ಚಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು, ರೈತ ಉತ್ಪಾದಕರ ಸಂಸ್ಥೆಗಳು, ಪ್ರಗತಿಪರ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳೊಂದಿಗೆ ವಲಯವಾರು ಚರ್ಚಿಸಬೇಕು ಎಂದು ನಿರ್ದೇಶಿಸಲಾಯಿತು.
ಸಭೆಯಲ್ಲಿ ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್, ಭಾರತೀಯ ರಿಸರ್ವ್ ಬ್ಯಾಂಕ್, ನಬಾರ್ಡ್, ವಿವಿಧ ಬ್ಯಾಂಕುಗಳು ಹಾಗೂ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.






