‘ಜನರ ಮನೆ ಬಾಗಿಲಿಗೆ ಸರಕಾರ’; ಪ್ರಜಾಸೇವೆ ಆಂದೋಲನದ ಉದ್ದೇಶ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವೆ' ಅಭಿಯಾನ ಜಿಲ್ಲೆಯ ಜನರಿಗೆ ಸರಕಾರದ ಸೌಲಭ್ಯಗಳು ಹಾಗೂ ಆಡಳಿತವನ್ನು ನೇರವಾಗಿ ಅವರ ಮನೆಬಾಗಿಲಿಗೆ ತಲುಪಿಸುವ ಯೋಜನೆಯಾಗಿದ್ದು, ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶನಿವಾರ ಇಲ್ಲಿನ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಕನಸಿನ, ಹೊಸ ಕಲ್ಪನೆಯ ನೂತನ ಪ್ರಜಾಸೇವಾ ಇಲಾಖೆಯನ್ನೇ ಹುಟ್ಟುಹಾಕಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆಯುವ ಬದಲು ಸರಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜನರು ತಮ್ಮ ಕೆಲಸಗಳಿಗಾಗಿ ಸರಕಾರಿ ಕಚೇರಿಗೆ ಅಲೆದು ಸುಸ್ತಾಗಿ ಕೊನೆಗೆ ಮಧ್ಯವರ್ತಿಗಳ ಕೈಗೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ಏಜೆಂಟ್‍ಗಳನ್ನು ಕಡಿವಾಣ ಹಾಕಲೇಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಪ್ರಜಾಸೇವೆ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ. ಸಿಎಂ ಪ್ರಜಾಸೇವೆ ಆಂದೋಲನ ನೂತನ ಇಲಾಖೆ ಪರಿಚಯಿಸಿದ್ದಾರೆ. ಈ ಕಾರ್ಯಕ್ರಮ ಪ್ರತಿ ಶನಿವಾರ ನಡೆಯಲಿದ್ದು ಎಲ್ಲ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಅನಧಿಕೃತ ಲೇಔಟ್‍ಗಳಿಂದಾಗಿ ಕೆರೆಗಳು ಮಾಯವಾಗಿವೆ. 30 ವರ್ಷಗಳಿಂದ ಕಾನೂನು ಬಾಹಿರ ಲೇಔಟ್‍ಗಳ ನಿರ್ಮಾಣವಾಗಿದ್ದು, ಡೆವಲಪರ್‍ಗಳು ವಿದ್ಯುತ್, ನೀರು, ಒಳಚರಂಡಿ, ಉದ್ಯಾನಗಳನ್ನು ಸರಕಾರ ನಿರ್ಮಿಸಬೇಕಾದ ಸ್ಥಿತಿ ಬಂದಿದೆ. ಇದಕ್ಕೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ನಗರದಲ್ಲಿ ಕಸದ ಸಮಸ್ಯೆ ಬೆಳೆದಿದೆ. ಈಗಾಗಲೇ ಸಮಸ್ಯೆ ಜಾಸ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಅವರು ಹೇಳಿದರು
ಅನಧಿಕೃತ ಬಡಾವಣೆ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೆ ಬೆಂಗಳೂರಿನಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಜಾಲವನ್ನು ಗುರುತಿಸುವ ಕಾರ್ಯ ಈಗಾಗಲೇ ಕೈಗೊಳ್ಳಲಾಗಿದೆ ಎಂದ ಅವರು, ಬೆಂಗಳೂರಿನಲ್ಲಿ ಸುಮಾರು 1.11 ಲಕ್ಷ ಸಾವಿರ ಜನರು ಖಾತೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಕ್ರಯಪತ್ರ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದ ಪ್ರಕರಣಗಳಲ್ಲಿ ಖಾತೆ ನೀಡುವ ಮುನ್ನ ಪರಿಶೀಲನೆ ನಡೆಸಬೇಕಿರುವುದರಿಂದ ವಿಳಂಬವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಋತ್ವಿಕ್ ರಂಜನ್ ಪಾಂಡೆ, ಬೆಂ.ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್., ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯತೀಶ್ ಆರ್., ಮಾಜಿ ಸಚಿವ ನಾಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






