‘ನೇಪಾಳ’ ಕಾಣೆಯಾಗಿರುವ ಸಂಬಂಧಿಕರ ಡಿಎನ್ಎ ಮಾದರಿ ಸಂಗ್ರಹಕ್ಕೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ನೋಡಲ್ ಕೇಂದ್ರವಾಗಿ ನಿಯೋಜನೆ

ಸಾಂದರ್ಭಿಕ ಚಿತ್ರ | Photo Credit : PTI
ಬೆಂಗಳೂರು : ನೇಪಾಳದಲ್ಲಿ ಉಂಟಾದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹದಲ್ಲಿ ಕಾಣೆಯಾಗಿರುವ ಕರ್ನಾಟಕದ ಸಂತ್ರಸ್ತರ ಪ್ರಥಮ ಹಂತದ ರಕ್ತಸಂಬಂಧಿಗಳ ಗುರುತು ಪತ್ತೆ ಹಚ್ಚಲು ಮತ್ತು ಡಿಎನ್ಎ ಮಾದರಿ ಸಂಗ್ರಹಕ್ಕಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ‘ನೋಡಲ್ ಕೇಂದ್ರ'ವನ್ನಾಗಿ ನಿಯೋಜಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ನೇಪಾಳದಲ್ಲಿ ಪತ್ತೆಯಾಗಿರುವ ಮೃತದೇಹಗಳ ಗುರುತು ಪತ್ತೆಹಚ್ಚಲು ಮತ್ತು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ನೇಪಾಳ ಸರಕಾರ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.
ನೇಪಾಳದಲ್ಲಿ ಸದ್ಯ ಫೋಟೋ ಹಾಗೂ ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನು ಪರಿಶೀಲಿಸಲು ರಕ್ತಸಂಬಂಧಿಗಳ ಡಿಎನ್ಎ ಮಾದರಿಯ ಅಗತ್ಯವಿದೆ.
ಆಸ್ಪತ್ರೆಯ ನೋಡಲ್ ಅಧಿಕಾರಿಗಳ ವಿವರ: ಸಂಬಂಧಿಕರ ಪರಿಶೀಲನೆ ಹಾಗೂ ಡಿಎನ್ಎ ಮಾದರಿ ಸಂಗ್ರಹಕ್ಕಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಡಾ.ನಾಗೇಶ್ ಕುಪ್ಪಸ್ಟ್(ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು) ಮತ್ತು ಡಾ.ವಾಡಿರಾಜ್ ಬಿ.ಪೊಕ್ಕನ್ (ಆರ್ ಎಮ್ಒ)ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಅಗತ್ಯ ದಾಖಲೆಗಳು: ನೇಪಾಳದಲ್ಲಿ ಕಾಣೆಯಾದವರ ಪ್ರಥಮಹಂತದ ಸಂಬಂಧಿಕರು(ತಂದೆ, ತಾಯಿ, ಮಗ, ಮಗಳು ಅಥವಾ ಸಂಗಾತಿ) ಡಿಎನ್ಎ ಪರೀಕ್ಷೆಗೆ ಆಗಮಿಸುವಾಗ ತಮ್ಮ ಇತ್ತೀಚಿನ ಒಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಸರಕಾರದಿಂದ ನೀಡಲಾದ ಗುರುತಿನ ಚೀಟಿ(ಆಧಾರ್ ಕಾರ್ಡ್) ಹಾಗೂ ಸಂಬಂಧವನ್ನು ಸಾಬೀತು ಪಡಿಸುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಜಿಲ್ಲಾಡಳಿತ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಪರಿಶೀಲಿಸಲ್ಪಟ್ಟ ನಂತರ ಈ ಮಾದರಿಗಳನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ನಂತರ ನೇಪಾಳದ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಅಥವಾ ನೆರವು ಪಡೆಯಲು ಕೆಎಸ್ಡಿಎಮ್ಎ ಹೆಲ್ಪ್ಲೈನ್ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ಕೋರಿದೆ.






