ಸಾಹಿತ್ಯವು ‘ಇನ್ನೊಬ್ಬರನ್ನು’ ಅರ್ಥಮಾಡಿಕೊಳ್ಳುವ ದಾರಿ : ವಿವೇಕ್ ಶಾನಭಾಗ

ಬೆಂಗಳೂರು : ಸಮಾಜದಲ್ಲಿ ಗೋಡೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ನಮಗೆ ಬೇರೆಯವರ ಸಂಸ್ಕೃತಿ ಮತ್ತು ಬದುಕನ್ನು ಪರಿಚಯಿಸಿ, ‘ಇನ್ನೊಬ್ಬರನ್ನು’ ಸಹಾನುಭೂತಿಯಿಂದ ನೋಡುವಂತೆ ಮಾಡುವಲ್ಲಿ ಸಾಹಿತ್ಯವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಹಿತಿ ವಿವೇಕ್ ಶಾನಭಾಗ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಅಲಿಯಾನ್ಸ್ ಫ್ರಾಂಸೇಝ್ ಸಭಾಂಗಣದಲ್ಲಿ ಮಾನಸ ಪ್ರಕಾಶನವು ಆಯೋಜಿಸಿದ್ದ ಲೇಖಕಿ ಡಾ.ತಸ್ನೀಮ್ ತಾಜ್ ರಚಿಸಿರುವ ‘ಅಗ್ಲಿ ಟಚ್ ಮತ್ತ ಇತರ ಕಥೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಲೇಖಕನಿಗೂ ‘ನಾನೇಕೆ ಬರೆಯುತ್ತೇನೆ?' ಎಂಬ ಪ್ರಶ್ನೆ ಮತ್ತು ಸಂದಿಗ್ಧಗಳು ಸದಾ ಕಾಡುತ್ತಿರಬೇಕು. ಇಂತಹ ಆಂತರಿಕ ಗೊಂದಲಗಳಿಗೆ ಸುಲಭದ ಉತ್ತರ ಸಿಕ್ಕ ದಿನ ಲೇಖಕನ ಬೆಳವಣಿಗೆ ನಿಂತುಹೋಗುತ್ತದೆ. ತಸ್ನೀಮ್ ಅವರ ಕಥೆಗಳಲ್ಲಿ ಲೇಖಕಿಯ ಇಂತಹ ಪ್ರಾಮಾಣಿಕ ಹುಡುಕಾಟ ಹಾಗೂ ಬೌದ್ಧಿಕ ಸ್ಪರ್ಶ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಎಂದರು.
ಲೇಖಕ ಸಾಮಾನ್ಯವಾಗಿ ಬರೆಯೋದು ನಾವು ಬೆಳೆದುಬಂದ ಪರಿಸರ, ನಮ್ಮ ಸಮಾಜ, ಸಮುದಾಯ, ಜಾತಿ ಇದೆಲ್ಲವೂ ಅದಕ್ಕೆ ತಳಕು ಹಾಕೊಂಡಿರುತ್ತದೆ. ಬರೆಯೋ ಹೊತ್ತಿಗೆ ಅದನ್ನು ನಾವು ವಸ್ತುನಿಷ್ಠವಾಗಿ ನೋಡುತ್ತೇವೆ. ಆಗ ಮನುಷ್ಯ ಒಂದು ರೀತಿಯಲ್ಲಿ ಸ್ವಲ್ಪ ಕಠಿಣವಾಗಬೇಕಾಗುತ್ತೆ. ಆದರೆ, ಒಂದು ಸತ್ಯವನ್ನು ನೋಡಬೇಕಾದಾಗ ನಾವು ಬರಹದ ಮೂಲಕ ಒಂದು ಅನ್ವೇಷಣೆಯನ್ನು ಮಾಡಲು ಹೊರಟಾಗ, ಈ ಸತ್ಯವನ್ನು ನೋಡೋದು ತುಂಬಾ ನೋವಿನ ಸಂಗತಿ. ಲೇಖಕರು ಎದುರಿಸುವ ಸಂಕಟ ಮತ್ತು ಸವಾಲುಗಳನ್ನು ತಸ್ನೀಮ್ ತಾಜ್ ತಮ್ಮ ಕಥೆಗಳಲ್ಲಿ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ವಿವೇಕ್ ಶಾನ್‍ಭಾಗ ಶ್ಲಾಘಿಸಿದರು.
ತಸ್ನೀಮ್ ಅವರ ಕತೆಗಳಲ್ಲಿ ಮುಂದಿನ ಪೀಳಿಗೆ ಹಾಗೂ ಯುವ ಸಮುದಾಯದ ಬಗ್ಗೆ ಅಪಾರವಾದ ಆಶಾಭಾವವಿದೆ. ಇಂದಿನ ಅಸಹನೆಯ ಸಮಾಜಕ್ಕೆ ಸಾಹಿತ್ಯದ ಪರಿಚಯ ಮತ್ತು ಓದು ಅತ್ಯಗತ್ಯ ಎಂದು ವಿವೇಕ್ ಶಾನ ಭಾಗ ಅಭಿಪ್ರಾಯಪಟ್ಟರು.
ಲೇಖಕಿ ಡಾ.ಕೆ.ಶರೀಫಾ ಮಾತನಾಡಿ, ಈ ಹಿಂದೆ ಕನ್ನಡದಲ್ಲಿ ಬರೆದಿರುವ ಸಾ.ರಾ.ಅಬೂಬಕರ್, ಭಾನುಮುಷ್ತಾಕ್ ಇವರುಗಳು ಮುಸ್ಲಿಮ್ ಸಮುದಾಯದ ಒಳಗೆ ಇರುವ ನೋವುಗಳ್ನು ತಮ್ಮ ಕಥೆ-ಕಾದಂಬರಿಗಳಲ್ಲಿ ತಿಳಿಸಿದ್ದಾರೆ. ತಸ್ನೀಮ್ ತಾಜ್ ಅವರ ಬರಹಗಳಲ್ಲಿ ಅಂತಹ ಯಾವುದೇ ಒಂದು ರೀತಿಯ ಸಂವೇದನೆ ಕಾಣುವುದಿಲ್ಲ. ಎಲ್ಲ ಸಮುದಾಯಗಳ ಜೊತೆಗೆ ಅವರಿಗಿರುವ ಅನುಭವನ್ನು ಕಥೆಗಳ ಮೂಲಕ ಕಟ್ಟಿಕೊಡುತ್ತಾರೆ. ತಸ್ನೀಂ ತಾಜ್ ಅವರು ಕನ್ನಡದಲ್ಲಿ ಇಸ್ಮತ್‍ಚುಟ್ಟಾಯಿ ಆಗುವಂತಹ ಭರವಸೆಯನ್ನು ಅವರ ಕತೆಗಳ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಸುಭಾಷ್ ರಾಜಮಾನೆ, ಡಾ.ತಸ್ನೀಮ್ ತಾಜ್, ಮಾನಸ ಪ್ರಕಾಶನದ ಚಂಪಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.






